ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಅಭಿನಂದನೆ

0


ರಜತ ಮಹೋತ್ಸವ ನೆನಪಿನ ಕುಮಾರಪರ್ವ ಸ್ಮರಣ ಸಂಚಿಕೆಯ ಬಿಡುಗಡೆ


ಸಂಸ್ಥೆಯ ಸಾಧನೆಗೆ ಶ್ರೀ ಮಾತಾ ಸಂಪೂಜ್ಯ ಸ್ವಾಮಿನಿ ಪ್ರಶಂಸೆ


ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 2022- 23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಕುಮಾರಪರ್ವ ಸ್ಮರಣ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವು ವಿದ್ಯಾಲಯದ ಕುಮಾರ ನಾಯರ್ ಸ್ಮೃತಿ ಭವನದಲ್ಲಿ ನಡೆಯಿತು.


ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು, ರಜತ ಮಹೋತ್ಸವದ ಅಂಗವಾಗಿ ಹೊರತರಲಾದ ಸಂಸ್ಮರಣಾ ಪುಸ್ತಕ ಕುಮಾರ ಪರ್ವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಅಮೃತಾನಂದಮಯಿ ಮಠದ ಶ್ರೀ ಮಾತಾ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು. ಕುಮಾರಸ್ವಾಮಿ ವಿದ್ಯಾಲಯವು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಪ್ರತಿ ವರ್ಷ ಶೈಕ್ಷಣಿಕ ಸಾಧನೆಗಳಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಶ್ಲಾಘಿಸಿದರು.


ಸ್ಮರಣ ಸಂಚಿಕೆ ಸಂಪಾದಕ ದುರ್ಗಾಕುಮಾರ್ ನಾಯರ್‌ಕೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ ಟಾಪರ್‌ಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಮಹತಿ, ಚತುರ್ಥ ಸ್ಥಾನ ಪಡೆದ ಅಭಿಜ್ಞಾ ಹಾಗೂ ಡಿಸ್ಟಿಂಕ್ಷನ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಸಂಸ್ಥೆಯ ಅಧ್ಯಕ್ಷ ಗಣೇಶ್‌ಪ್ರಸಾದ್ ಎನ್. ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಚಂದ್ರಶೇಖರ ನಾಯರ್ ಸ್ವಾಗತಿಸಿದರು. ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ವನಿತಾ ಉದಯ್ ಕೂಜುಗೋಡು ಸಂಚಿಕೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಾದ ಪೂರ್ವಿಕಾ ಕಾರ್ಯಕ್ರಮ ನಿರೂಪಿಸಿ, ಯಶ್ವಿನಿ ವಂದಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾರತ್ನ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂಕೀರ್ತ ಹೆಬ್ಬಾರ್, ರಜತಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ್ ಏನೆಕಲ್, ಶಾಲಾ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ಪ್ರಸಾದ್ ಮುನಿಯಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.