ಯುವಕನ ಸ್ವಾವಲಂಬಿ ಬದುಕಿಗೆ ದಾರಿಯಾಯಿತು ದೇಸಿ ತಳಿ ಹೈನುಗಾರಿಕೆ

0

ಅಳಿವಿನಂಚಿನಲ್ಲಿರುವ ಕಪಿಲಾ ತಳಿ ಹಸು ಸಾಕಾಣಿಕೆ ಮಾಡುತ್ತಿರುವ ಬೆಳ್ಳಾರೆಯ ಯುವಕ

ಹಾಲು, ಗೊಮೂತ್ರ, ಗೋಮಯ ಹೀಗೆ ಪ್ರತಿಯೊಂದರಲ್ಲೂ ಔಷಧಿಯ ಗುಣ ಹೊಂದಿರುವ ಅಪರೂಪದ ದೇಸಿ ತಳಿ ಕಪಿಲೆಯನ್ನು ಬೆಳ್ಳಾರೆಯ ಯುವಕರೊಬ್ಬರು ಸಾಕುತ್ತಿದ್ದು, ಹನ್ನೊಂದು ಕಪಿಲೆಯರೊಂದಿಗೆ ಕೈ ತುಂಬಾ ಸಂಪಾದನೆ ಜೊತೆಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಬೀಡು ಪ್ರವೀಣ್ ದೇಸಿ ತಳಿ ಹಸುವನ್ನು ಸಾಕುವುದರ ಮೂಲಕ ಸ್ವವಲಂಬಿಯಾದ ಯುವಕ. ಖಾಸಗಿ ಬಸ್ ಚಾಲಕ ವೃತ್ತಿ ಮಾಡುತ್ತಿದ್ದ ಪ್ರವೀಣ್ ಕೊರೋನ ಸಂದರ್ಭದಲ್ಲಿ ಉದ್ಯೋಗ ತೊರೆದು ತನ್ನ 15 ಸೆಂಟ್ಸ್ ಜಾಗದಲ್ಲಿ ಹೈನುಗಾರಿಕೆ ಆರಂಭಿಸುವ ಉದ್ದೇಶದಿಂದ ಕಪಿಲ ಜಾತಿಯ ಆಕಳು ಕರುವನ್ನು ಖರೀದಿಸಿ ಹೈನುಗಾರಿಕೆ ಆರಂಭಿಸಿದರು. ಈಗ ಇವರ ಮನೆಯಲ್ಲಿ ಹನ್ನೊಂದು ಕಪಿಲ ಗೋವುಗಳಿವೆ.

ಯುವಕರಿಗೆ ಮಾದರಿ
ಪರಿಶ್ರಮದಿಂದ ದುಡಿದರೆ ಯಾವುದೇ ಕೆಲಸದಲ್ಲೂ ಆರ್ಥಿಕವಾಗಿ ಬೆಳೆಯಬಹುದು ಎಂಬುವುದಕ್ಕೆ ಪ್ರವೀಣ್ ಮಾದರಿಯಾಗಿದ್ದಾರೆ. ಒಂದು ಕಪಿಲ ಗೋವಿನಿಂದ ಸಿಗುವ ಹಾಲು ಮಾರಿ ವೃತ್ತಿ ಆರಂಭಿಸಿ ಈಗ ಹನ್ನೊಂದು ಗೋವುಗಳಿಂದ ಹಾಲಿನ ಜೊತೆ ಗೋವಿನ ಉಪ ಉತ್ಪಾದನೆಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.

ಹಾಲಿಗೆ ಭಾರಿ ಬೇಡಿಕೆ
ಕಪಿಲ ತಳಿಯ ಗೋವಿನ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಔಷಧಿಯ ಗುಣವಿರುವ ಇದರ ಹಾಲು ಲೀಟರ್ ಗೆ ರೂ.80ರಂತೆ ಮಾರಾಟವಾಗುತ್ತಿದ್ದು, ಪೂರೈಕೆಗಿಂತ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಪ್ರವೀಣ್.
ಇತ್ತೀಚಿನ ದಿನಗಳಲ್ಲಿ ಗೋವುಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದೆ. ಅದರಲ್ಲೂ ದೇಶಿ ತಳಿಗಳ ಗೋವು ಸಾಕಾಣಿಕೆ ಕಾಣಸಿಗುವುದು ಅಪರೂಪ. ಪ್ರವೀಣ್ ಅವರು ತಾನು ಸಾಕಾಣಿಕೆ ಮಾಡುತ್ತಿರುವ ಗೋವುಗಳಿಂದ ಬರುವ ಗೋಮೂತ್ರ, ಸೆಗಣಿ ಉಪಯೋಗಿಸಿಕೊಂಡು ಮಾರುಕಟ್ಟೆಯಲ್ಲಿ ಸಿಗುವ ದೂಪ, ವಿಭೂತಿ, ಸೊಳ್ಳೆ ಬತ್ತಿ, ಅಗರಬತ್ತಿ ತಯಾರಿಸಿ ಮಾರಾಟ ಮಾಡಿ ಆದಾಯಗಳಿಸುತ್ತಿದ್ದಾರೆ.

✍️ ಉಮೇಶ್ ಮಣಿಕ್ಕಾರ