ರಾಷ್ಟ್ರೀಯ ಓದುವ ದಿನದ ಅಂಗವಾಗಿ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಸರ್ಕಾರಿ ಶಾಲೆಗಳಿಗೆ ಪುಸ್ತಕ ವಿತರಣೆ

0

ರಾಷ್ಟ್ರೀಯ ಓದುವ ದಿನದ ಅಂಗವಾಗಿ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಸರ್ಕಾರಿ ಶಾಲೆಗಳಿಗೆ ಓದುವ ಕಥೆ, ಕವನಗಳ ಪುಸ್ತಕಗಳನ್ನು ವಿತರಿಸಲಾಯಿತು.


ಸುಳ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷ ಕೆ.ವಿ. ಚಿದಾನಂದರವರು ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಣೆ ಮಾಡಿ, ದಿನದ ಮಹತ್ವದ ಕುರಿತು ಮಾತನಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಶಾಲೆಯಲ್ಲಿ ನಮ್ಮ ಪೂಜ್ಯ ತಂದೆ ದಿ.ವೆಂಕಟರಮಣ ಗೌಡರು ಅದೇ ರೀತಿ ನಾನು ಕೂಡ ಕಲಿತಂತ ಶಾಲೆ ಇದಾಗಿದ್ದು ಇಂತಹ ಶಾಲೆಗಳಲ್ಲಿ ಈ ರೀತಿಯ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದ್ದು, ನಮ್ಮ ತಂದೆಯರ ಕಾಲದಲ್ಲಿ ಈ ಶಾಲೆಯಲ್ಲಿಯೂ ಕೂಡ ಪುಸ್ತಕಗಳ ಕೊಡುಗೆ, ಅವುಗಳನ್ನು ಇಡುವ ಕಪಾಟುಗಳ ಕೊಡುಗೆ ಮುಂತಾದ ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಮಾಹಿತಿ ಲಭಿಸಬೇಕೆಂದು ಇಂಗ್ಲಿಷ್ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನಮ್ಮ ತಂದೆಯವರು ನೀಡುತ್ತಿದ್ದರು. ಇಂದಿಗೂ ಕೂಡ ಹಲವಾರು ಶಾಲೆಗಳಲ್ಲಿ ಅವರು ನೀಡಿದಂತಹ ಕಪಾಟುಗಳನ್ನು ಶಾಲೆಯವರು ರಕ್ಷಿಸಿಕೊಂಡು ಬಂದಿದ್ದಾರೆ.
ಈ ದಿನದ ಕಾರ್ಯಕ್ರಮ ಯಶಸ್ವಿಯಾಗಬೇಕೆಂದರೆ ವಿದ್ಯಾರ್ಥಿಗಳು ಇಂದಿನ ಕಾರ್ಯಕ್ರಮದ ಬಗ್ಗೆ ತಮ್ಮ ಮನೆಗಳಲ್ಲಿ ಹೋಗಿ ಪೋಷಕರು ಮತ್ತು ಸಹೋದರ ಸಹೋದರಿಯರಲ್ಲಿ ಹೇಳಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವಂತೆ ಮಾಡಬೇಕು. ಪ್ರತಿ ಶಾಲೆಗಳಲ್ಲಿ ವಾರದ ಒಂದು ದಿನವಾದರೂ ಒಂದು ಗಂಟೆಯ ಸಮಯ ಈ ರೀತಿಯ ಪುಸ್ತಕಗಳನ್ನು ಓದಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿ ಕೊಡಬೇಕು. ಆಗಿದ್ದಲ್ಲಿ ವಿದ್ಯಾರ್ಥಿಗಳ ಜ್ಞಾನ ಶಕ್ತಿ ಮತ್ತು ಓದುವ ಹವ್ಯಾಸವು ಬೆಳೆಯುತ್ತಾ ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿರಾಜ್ ವಹಿಸಿದ್ದರು.
ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜ್ ಮುಖ್ಯಸ್ಥೆ ಶ್ರೀಮತಿ ನೀಲಾಂಬಿಕೆ ನಟರಾಜನ್, ಕಾಲೇಜ್ ಉಪನ್ಯಾಸಕಿ ಡಾ. ನವ್ಯ, ಕೆವಿಜಿ ಆಸ್ಪತ್ರೆಯ ಕಿರಿಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಂಸ್ಥೆಯ ಕಿರಿಯ ವೈದ್ಯರಾದ ಲೇಖನ್ ಮತ್ತು ಸ್ನೇಹ ರವರು ಈ ದಿನದ ಬಗ್ಗೆ ಮಾತನಾಡಿ ಓದುವ ಹವ್ಯಾಸದ ಕುರಿತು ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಇಂದಿನ ದಿನದ ರಾಷ್ಟ್ರೀಯ ಓದುವ ದಿನದ ಕುರಿತು ಚುಟುಕಾಗಿ ಭಾಷಣ ಮಾಡಿ ಗಣ್ಯರ ಗಮನ ಸೆಳೆದರು.
ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಹೇಮಲತಾ ಕಾರ್ಯಕ್ರಮ ನಿರೂಪಿಸಿ ಮಲ್ಲಿಕಾ ವಂದಿಸಿದರು.
ಕೆವಿಜಿ ಮೆಡಿಕಲ್ ಕಾಲೇಜು ವತಿಯಿಂದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಈ ಸಂದರ್ಭದಲ್ಲಿ ಶಾಲೆಗೆ ನೀಡಲಾಯಿತು.