ಬೆಳ್ಳಾರೆ ಜ್ಞಾನಗಂಗಾ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ

0

ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ಜೂ. ೨೪ ರಂದು ನಡೆಯಿತು. ಮುಖ್ಯ ಅತಿಥಿಗಳಾದ ಪ್ರೊ. ಬಾಲಚಂದ್ರ ಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಶಾಲಾ ವಿದ್ಯಾರ್ಥಿ ಪದಾಧಿಕಾರಿಗಳಿಗೆ, ಶಾಲಾ ಪ್ರಾಂಶುಪಾಲರಾದ ದೇಚಮ್ಮ ಟಿ. ಎಮ್ ರವರು ಪ್ರತಿಜ್ಞಾ ವಿಧಿ ನೀಡಿದರು. ಪ್ರತಿಜ್ಞಾ ವಿಧಿ ಸ್ವೀಕರಿಸಿದ ಪದಾಧಿಕಾರಿಗಳು ಮುಖ್ಯ ಅತಿಥಿಗಳಿಂದ ಬ್ಯಾಡ್ಜ್ ಹಾಗೂ ಧ್ವಜ ಸ್ವೀಕಾರ ಮಾಡಿದರು.

ಅನಂತರ ತಮ್ಮ ತಮ್ಮ ಧ್ಯೇಯ ವಾಕ್ಯವನ್ನು ನೀಡಿ ಪದಾಧಿಕಾರಿಗಳು ಆಸನ ಸ್ವೀಕರಿಸಿದರು. ಬಳಿಕ ಶಾಲಾ ವಿದ್ಯಾರ್ಥಿ ನಾಯಕ ಸಂಚಯ್ ಬಿ ರೈ ಮಾತನಾಡಿ ನನ್ನನ್ನು ಶಾಲಾ ನಾಯಕನನ್ನಾಗಿ ಗುರುತಿಸಿರುವುದು ನನಗೆ ಹೆಮ್ಮೆಯೆನಿಸಿದೆ. ನಾನು ನನ್ನ ಶಾಲೆಗೆ ಕೃತಜ್ಞನಾಗಿರುತ್ತೇನೆ ಎಂದನು . ಶಾಲಾ ವಿದ್ಯಾರ್ಥಿ ನಾಯಕಿ ಮಾತನಾಡಿ ನಾಯಕತ್ವವು ನಮ್ಮ ಸಾಮರ್ಥ್ಯಗಳನ್ನು ಒರೆಗೆ ಹಚ್ಚುವುದಾಗಿದೆ. ನಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದಾಗಿದೆ ಎಂದಳು.


ಮುಖ್ಯ ಅತಿಥಿಗಳಾದ ಪ್ರೊ.ಬಾಲಚಂದ್ರ ಗೌಡರು ಮಾತನಾಡಿ, “ನಾವು ಪ್ರಜಾ ಪ್ರಭುತ್ವದ ಅಡಿಯಲ್ಲಿದ್ದೇವೆ. ಇಂದು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಳ್ಳುವುದು ನಾಯಕತ್ವವಾಗಿದೆ. ನಾಯಕರು ಮಾದರಿಯಾಗಿರಬೇಕು. ತನ್ನನ್ನು, ತನ್ನ ಕುಟುಂಬ, ತನ್ನ ಪರಿಸರ, ತನ್ನ ದೇಶವನ್ನು ಪ್ರೀತಿಸಬೇಕು. ಋಣಾತ್ಮಕ ಚಿಂತನೆಯನ್ನು ಧನಾತ್ಮಕವಾಗಿ ಮಾರ್ಪಡಿಸಿಕೊಂಡು ಸವಾಲನ್ನು ಸ್ವೀಕರಿಸುವವನೇ ನಾಯಕನು. ಸಾಮರ್ಥ್ಯವನ್ನು ಬಳಸಿಕೊಂಡು ಬೆಳೆಯಲು ಈ ಜ್ಞಾನ ಗಂಗಾ ವಿದ್ಯಾಸಂಸ್ಥೆಯಲ್ಲಿ ವಿಪುಲ ಅವಕಾಶಗಳಿವೆ” ಎಂದು ನುಡಿದರು.


ಶಾಲಾ ಸಂಚಾಲಕರಾದ ಎಂ ಪಿ ಉಮೇಶ್ ರವರು ಪ್ರಪ್ರಥಮವಾಗಿ ಪದಾಧಿಕಾರಿಗಳನ್ನು ಅಭಿನಂದಿಸಿದರು. ಆ ಬಳಿಕ ಮಾತನಾಡಿ ನಾಯಕತ್ವ ಗುಣ ಮನೆಯಿಂದ ಆರಂಭಗೊಳ್ಳುತ್ತದೆ. ಪರಂಪರಾಗತವಾಗಿ ಬಂದಿರುವ ಗುಣಗಳು ಮಕ್ಕಳಿಗೆ ಜೀವನದ ತಳಹದಿಯಾಗಿ ನಿಲ್ಲುತ್ತದೆ. ಶಾಲಾ ಹಂತದಲ್ಲಿ “ನಾಯಕ ಅಥವಾ ಲೀಡರ್” ಪದ ಪ್ರಾರಂಭವಾಗುತ್ತದೆ. ಅಲ್ಲಿ ಆ ಗುಣವನ್ನು ಬೆಳೆಸಿಕೊಂಡ ಮಗು ಮುಂದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ ಎಂದರು. ನಾಯಕತ್ವದ ಲಕ್ಷಣಗಳನ್ನು ಸವಿಮಾತುಗಳಿಂದ ವಿವರಿಸಿದರು.

ಸೇವಕನಂತೆ ಕೆಲಸದಲ್ಲಿ ನಿರತನಾಗಿರಬೇಕು. ಕೆಲಸದಲ್ಲಿ ಪರಿಣತಿ ಹೊಂದಿರಬೆಕು. ಪ್ರಚಲಿತ ವಿದ್ಯಾಭಿಮಾನಿಗಳಿಗೆ ತನ್ನನ್ನು ತಾನು ತೆರೆದಿಡಬೇಕು. ಕೆಲಸದಲ್ಲಿ ಬದ್ಧತೆ ಕುತೂಹಲ ಇರಬೇಕು. ಅಹಂ ಇರಬಾರದು. ಕೆಲಸದಲ್ಲಿ ಆತ್ಮ ಸ್ಥೈರ್ಯ ಹಾಗೂ ಆತ್ಮ ಹತೋಟಿಗಳು ಇರಬೇಕು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಶತಸಿದ್ಧ ಎಂದರು.
ಕಾರ್ಯಕ್ರಮವನ್ನು ದಮನಿ ಸ್ವಾಗತಿಸಿ, ಶಾರ್ವರಿ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಸ್ತುತಿ ಭಟ್ ಹಾಗೂ ಅಫಾಮ್ ಕಾರ್ಯಕ್ರಮ ನಿರೂಪಿಸಿದರು.