ಕೊಯಿಕುಳಿ ಹಿ.ಪ್ರಾ‌.ಶಾಲಾ ಇಬ್ಬರು ಶಿಕ್ಷಕರ ವರ್ಗಾವಣೆ

0

ಖಾಯಂ ಶಿಕ್ಷಕರನ್ನು ನೀಡುವಂತೆ ಬಿಇಒ ಕಚೇರಿಗೆ ಪೋಷಕರ ಮನವಿ

ದುಗ್ಗಲಡ್ಕ ಸಮೀಪದ ಕೊಯಿಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಕಾಯಂ ಶಿಕ್ಷಕರು ವರ್ಗಾವಣೆ ಗೊಂಡಿದ್ದು, ಇದರಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ನಮ್ಮ ಶಾಲೆಗೆ ಖಾಯಂ ಶಿಕ್ಷಕರ ಕೊಡಬೇಕೆಂದು ಆಗ್ರಹಿಸಿ ಶಾಲಾ ಎಸ್‌. ಡಿ.ಎಂ.ಸಿ .ಮತ್ತು ಪೋಷಕರು ಇಂದು ಸುಳ್ಯ ಬಿಇಒ ಕಚೇರಿಗೆ ಮನವಿ ಸಲ್ಲಿಸಿದರು.


ಕೊಯಿಕುಳಿ ಶಾಲೆ ಶತಮಾನ ಪೂರೈಸಿದ ಶಾಲೆಯಾಗಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ.ಈ ಶಾಲೆಯಲ್ಲಿ ಈಗಲೂ ಸುಮಾರು 95 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಓರ್ವ ಖಾಯಂ ಮುಖ್ಯಶಿಕ್ಷಕ ಹಾಗೂ ಓರ್ವ ಖಾಯಂ ಸಹ ಶಿಕ್ಷಕಿ ಇದ್ದು,ಇಬ್ಬರು ನೇಮಕಗೊಂಡ ಅತಿಥಿ ಶಿಕ್ಷಕರು ಹಾಗೂ ಪೋಷಕರ ವತಿಯಿಂದ ನೇಮಕಗೊಂಡ ಓರ್ವ ಗೌರವ ಶಿಕ್ಷಕರು ಪಾಠ ಮಾಡುತ್ತಿದ್ದಾರೆ .ಈ ಶಿಕ್ಷಕರಿಗೆ ಪೋಷಕರೆ ಹಣ ಸಂಗ್ರಹ ಮಾಡಿ ವೇತನ ಮಾಡಬೇಕಾಗುತ್ತದೆ. ಇದೀಗ ಮುಖ್ಯ ಶಿಕ್ಷಕರಾಗಿರುವ ಮಾಧವ ಎಂ.ರವರನ್ನು ಮತ್ತು ಸಹಶಿಕ್ಷಕಿ ಚಂದ್ರಕಲಾರವರನ್ನು ವರ್ಗಾವಣೆ ಮಾಡಿ ಆದೇಶ ಬಂದಿರುತ್ತದೆ.ಇದರಿಂದಾಗಿ ಖಾಯಂ ಶಿಕ್ಷಕರಿಲ್ಲದೆ ಕೇವಲ ಗೌರವ ಶಿಕ್ಷಕರಿಂದಲೇ ಶಾಲೆ ನಡೆಯುವಂತಾಗಿದೆ .

ಆದ್ದರಿಂದ ನಮ್ಮ ಶಾಲೆಗೆ ಬೇರೆ ಶಿಕ್ಷಕರ ನೇಮಕವಾಗದ ಹೊರತು ವರ್ಗಾವಣೆ ಆದೇಶ ಪಡೆದ ಶಿಕ್ಷಕರನ್ನು ಶಾಲೆಯಿಂದ ಕಳುಹಿಸಬಾರದು. ಮುಂದೆ ಹೊಸ ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ನಮ್ಮ ಶಾಲೆಗೆ ಪ್ರಾಶಸ್ತ್ಯ ನೀಡಿ ತೆರವಾದ ಹುದ್ದೆಗಳಿಗೆ ಶಿಕ್ಷಕರ ನೇಮಕವಾಗುವಂತೆ ನೋಡಿಕೊಳ್ಳಬೇಕು ಎಂದು ಪೋಷಕರು ಮನವಿಯನ್ನು ಸಲ್ಲಿಸಿದರು.
ಮನವಿಯನ್ನು ಬಿಇಒ ರವರ ಅನುಪಸ್ಥಿತಿಯಲ್ಲಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಕಿಶೋರ್ ಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕರಾದ ರತ್ನಾಕರ್ ರವರಿಗೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶೀಲಾವತಿ ಮಾಧವ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ.,ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಗಂಗಾಧರ ನೀರಬಿದಿರೆ ಹಾಗೂ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಡೆಪ್ಯುಟೇಷನ್ ನೆಲೆಯಲ್ಲಿ ಶಿಕ್ಷಕರು ಬರಲಿದ್ದಾರೆ; ಬಿಇಒ ಕಚೇರಿ

ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಗೆ ವರ್ಗಾವಣೆ ಗೊಂಡಿರುವ ಮುಖ್ಯ ಶಿಕ್ಷಕ ಮಾಧವ ಎಂ.ರವರು ವಾರದಲ್ಲಿ ಮೂರು ದಿನ ಹಾಗೂ ದೊಡ್ಡತೋಟ ಶಾಲೆಗೆ ವರ್ಗಾವಣೆಗೊಂಡಿರುವ ಸಹ ಶಿಕ್ಷಕಿ ಚಂದ್ರಕಲಾ ಪೂರ್ಣಕಾಲಿಕವಾಗಿ ಡೆಪ್ಯುಟೇಷನ್ ನೆಲೆಯಲ್ಲಿ ಬರಲಿದ್ದಾರೆ ಎಂದು ಬಿಇಒ ಕಚೇರಿ ವ್ಯವಸ್ಥಾಪಕರು ತಿಳಿಸಿದ್ದಾರೆ. ತಾಲೂಕಿನಲ್ಲಿ ತೀವ್ರ ಶಿಕ್ಷಕರ ಕೊರತೆ ಇದೆ.ಕೊಯಿಕುಳಿ ಶಾಲೆಯಲ್ಲಿ ಇದ್ದ ಇಬ್ಬರು ಶಿಕ್ಷಕರು ವರ್ಗಾವಣೆ ಪಡೆದಿರುವುದರಿಂದ ಶೂನ್ಯ ಶಿಕ್ಷಕರ ಶಾಲೆಯಾಗಿದ್ದು,ಯಾವ ಶಾಲೆಯಲ್ಲಿಯೂ ಹೆಚ್ಚುವರಿ ಶಿಕ್ಷಕರು ಇಲ್ಲದೆ ಇರುವುದರಿಂದ ತಕ್ಷಣ ಶಿಕ್ಷಕರನ್ನು ಕೊಡಲು ಕಷ್ಟ ಸಾಧ್ಯ. ಅತಿಥಿ ಶಿಕ್ಷಕರ ನೇಮಕವಾದಲ್ಲಿ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.