ಮೋಹನ್ ಸೋನ ಅಭಿಮಾನಿ ಬಳಗದ ವತಿಯಿಂದ ಗ್ರಾ.ಪಂ. ಮೂಲಕ ಮನವಿ ಸಲ್ಲಿಕೆ
ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ನೂತನ ಸರ್ಕಲ್ ನಿರ್ಮಾಣ ಕಾರ್ಯ ಜರುಗುತ್ತಿದೆ. ಈ ನೂತನ ವೃತ್ತಕ್ಕೆ ಸೋಣಂಗೇರಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕಲಾವಿದ ದಿ. ಮೋಹನ ಸೋನ ಅವರ ಹೆಸರಿಡುವಂತೆ ಮೋಹನ ಸೋನ ಅಭಿಮಾನಿ ಬಳಗದ ವತಿಯಿಂದ ಗ್ರಾಮ ಪಂಚಾಯತಿಯ ಮೂಲಕ ಲೋಕೋಪಯೋಗಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಆ.೮ರಂದು ಜರುಗಿದ ಜಾಲ್ಸೂರು ಗ್ರಾಮ ಪಂಚಾಯತಿ ವಾರ್ಡ್ ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಮೋಹನ ಸೋನ ಅವರು ಸೋಣಂಗೇರಿಯಲ್ಲಿ ಜನಿಸಿ, ಶಿಕ್ಷಕನಾಗಿ, ಕೇಂದ್ರ ಸರಕಾರದ ಸಿ.ಪಿ.ಸಿ.ಆರ್.ಐ.ಯಲ್ಲಿ ಪತ್ರಾಂಕಿತ ಕಲಾವಿದನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂರು ದಶಕಗಳ ಹಿಂದೆ ಇಡೀ ಸೋಣಂಗೇರಿಯ ನಲ್ವತ್ತು ಮೂಲ ಮನೆಗಳಲ್ಲಿ ಸಾಕಾರಗೊಳಿಸಿದ ’ಬಯಲು ಚಿತ್ರಾಲಯ’ ಎಂಬ ವಿಶಿಷ್ಟ ಪರಿಕಲ್ಪನೆಯ ಕಲಾಶಿಬಿರವನ್ನು ಹದಿನೈದು ದಿನಗಳಲ್ಲಿ ನಡಿಸಿದ್ದ ಕೀರ್ತಿ ಮೋಹನ ಸೋನರಿಗೆ ಸಲ್ಲುತ್ತದೆ. ಇವೆಲ್ಲವನ್ನು ಪರಿಗಣಿಸಿ ವೃತ್ತಕ್ಕೆ ದಿ. ಮೋಹನ ಸೋನ ಅವರ ಹೆಸರಿಡುವುದು ಅಥವಾ ಮೋಹನ ಸೋನರ ಕಲಾಕೃತಿ ಆಧಾರಿತ ಯಾವುದೇ ಶಾಶ್ವತ ಮಾಧ್ಯಮದ ಶಿಲ್ಪವನ್ನು ವೃತ್ತದಲ್ಲಿರಿಸಿ, ವೃತ್ತಕ್ಕೆ ಮೋಹನ ಸೋನ ವೃತ್ತ ಅಥವಾ ಸ್ವರ್ಣಗಿರಿ ಎಂಬ ಹೆಸರನ್ನು ಇಡಬೇಕೆಂದು ಲೋಕೋಪಯೋಗಿ ಸಚಿವಾಲಯಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಮೋಹನ ಸೋನ ಅಭಿಯಾನಿ ಬಳಗದ ಸದಸ್ಯರುಗಳಾದ ನಂದನ ಸೋನ, ಸತ್ಯಶಾಂತಿ ತ್ಯಾಗಮೂರ್ತಿ, ಗಂಗಾಧರ ರೈ ಸೋಣಂಗೇರಿ, ಗ್ರಾ.ಪಂ. ಸದಸ್ಯ ಈಶ್ವರ ನಾಯ್ಕ ಕುಕ್ಕಂದೂರು, ಗೋಪಾಲಕೃಷ್ಣ ಗೌಡ ಸುತ್ತುಕೋಟೆ, ಚಿದಾನಂದ ಕುಕ್ಕಂದೂರು, ಪ್ರವೀಣ್ ಕೊಯಿಂಗೋಡಿಮೂಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಸದಸ್ಯರಾದ ಶ್ರೀಮತಿ ಅಂಬಿಕಾ ಕುಕ್ಕಂದೂರು, ಶಿವಪ್ರಸಾದ್ ನೀರಬಸಿರು, ಶ್ರೀಮತಿ ದೀಪ ಅಜಕಳಮೂಲೆ ಉಪಸ್ಥಿತರಿದ್ದರು.