ಕೋಡಂಬಾರೆಯಲ್ಲಿ ನಿರ್ಮಾಣವಾಗಲು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ ಅನುದಾನವನ್ನು ಬೇರೆಡೆಗೆ ಸ್ಥಳಾಂತರಿಸಿರುವುದಲ್ಲದೇ, ಈಗ ಇಲ್ಲ ಸಲ್ಲದ ಕಾರಣಗಳನ್ನು ಜನಪ್ರತಿನಿಧಿಗಳು ನೀಡುವುದಾದರೆ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುವುದು ಹೇಗೆ ಎಂದು ಮಾಣಿಮರ್ಧು ಪ.ಪಂಗಡದ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೋಡಂಬಾರೆಯಲ್ಲಿ ನಿರ್ಮಾಣವಾಗಬೇಕಾದ ಕಾಲುಸಂಕವನ್ನು ನಮ್ಮ ಗಮನಕ್ಕೆ ತಾರದೇ ಬೇರೆಡೆ ಸ್ಥಳಾಂತರಿಸುವುದು ಸರಿಯಲ್ಲ. ನಾವು ಈಗಾಗಲೇ ಮೂಲಭೂತ ಸೌಕರ್ಯ ದಿಂದ ವಂಚಿತರಾಗಿರುವುದು ನಮ್ಮ ಪಂಚಾಯತ್ ಪ್ರತಿನಿಧಿಗಳಿಗೆ ಗೊತ್ತೆ ಇದೆ. ಶಾಲಾ ಮಕ್ಕಳು ದಿನನಿತ್ಯ ಕಷ್ಟ ಪಟ್ಟು ಹೋಗುವ ಪರಿಸ್ಥಿತಿ ಇದೆ. ಇದೆಲ್ಲಾ ವಿಚಾರ ಗೊತ್ತಿದ್ದು, ಪಂಚಾಯತ್ ಪ್ರತಿನಿಧಿಗಳು ಮಂಜೂರಾದ ಜಾಗದಲ್ಲೇ ಕಾಲು ಸಂಕ ನಿರ್ಮಿಸಬೇಕಿತ್ತು. ಆದರೆ ಅವರು ಯಾರ ಗಮನಕ್ಕೂ ತಾರದೇ ಅವರಿಗೆ ತೋಚಿದಂತೆ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮಸ್ಯೆ ಯಾಗಬಹುದು ಎಂದು ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಯಾಗಿ ನಮಗೆ ಸವಲತ್ತುಗಳನ್ನು ದೊರಕಿಸುವ ಬಗ್ಗೆ ಚಿಂತಿಸಬೇಕೆ ವಿನಃ ಅದನ್ನು ಕಬಳಿಸುವ ಹುನ್ನಾರ ಮಾಡಬಾರದು.
ಬದುಕುವ ಹಕ್ಕು ಇದೆಯೆಂದಾದಲ್ಲಿ ಸೌಲಭ್ಯ ಕೊಡಿ ಇಲ್ಲವೆಂದಾದಲ್ಲಿ ವಿಷ ಕೊಡಿ. ಮಂಜೂರಾದ ಸ್ಥಳದಲ್ಲೆ ಸೇತುವೆ ನಿರ್ಮಿಸಿ ಕೊಡಬೇಕು ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಬಂದ ವರದಿಗೆ ಪಂಚಾಯತ್ ಉಪಾಧ್ಯಕ್ಷರವರ ಹೇಳಿಕೆಗೆ ಮಾಣಿ ಮರ್ಧು ಪ್ರದೇಶದ ಶ್ರೀಧರ ಮಾಣಿಮರ್ಧುರವರು ಪ್ರತಿಕ್ರಿಯಿಸಿದ್ದಾರೆ.