ಗಣೇಶೋತ್ಸವ ಹಿನ್ನೆಲೆ: ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0


ಗಣೇಶೋತ್ಸವ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ರವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು. ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್‌ಐ ಸರಸ್ವತಿ ಉಪಸ್ಥಿತರಿದ್ದರು.

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಆಚರಿಸಲು ಅನುಮತಿ ಪತ್ರದಲ್ಲಿ ಇಲಾಖೆಯಿಂದ ನೀಡಿರುವ ಸೂಚನೆಗಳನ್ನು ಅನುಸರಿಸಿ ಶಾಂತಿಯುತವಾಗಿ ನಡೆಸುವಂತೆ ಹೇಳಿದರು.
ಶೋಭಾ ಯಾತ್ರೆಯಲ್ಲಿ ವಾಹನ ದಟ್ಟಣೆ, ಶಬ್ದ ಮಾಲಿನ್ಯ, ಪಟಾಕಿಗಳು ಸಿಡಿಸುವ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಜಾಗೃತಿ ವಹಿಸಿಕೊಳ್ಳಬೇಕೆಂದು ಸೂಚನೆ ಸಲಹೆ ನೀಡಿದರು.
ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡುವ ಪ್ರದೇಶಗಳಲ್ಲಿ ಹೆಚ್ಚು ಧ್ವನಿವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು, ಸ್ಥಳದಲ್ಲಿ ಅಗ್ನಿಶಾಮಕ ವಾಹನಗಳು, ತುರ್ತು ಚಿಕಿತ್ಸಾ ವ್ಯವಸ್ಥೆಗಳು ಮುಂತಾದ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಂಡು ಸ್ವಯಂ ಸೇವಕರನ್ನು ಹೆಚ್ಚಾಗಿ ನೇಮಿಸಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದೆ ನೋಡಿಕೊಳ್ಳಬೇಕೆಂದು ತಿಳಿಸಿದರು.


ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ಮಾತನಾಡಿ, ಹಬ್ಬಾಚರಣೆಯನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಚರಿಸಿಕೊಂಡು ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಬಾರದ ರೀತಿಯಲ್ಲಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು. ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಯಾ ಸಂಘಟನೆಯ ಕಾರ್ಯಕರ್ತರು, ಮತ್ತು ಮುಖಂಡರ ಜವಾಬ್ದಾರಿ ಕೆಯಲ್ಲಿ ನಡೆಸಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆಗಳು ಬಂದಲ್ಲಿ ಮೊದಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ,ಅಲ್ಲದೆ ಯಾವುದೇ ಕಾರಣಕ್ಕೂ ಪರಸ್ಪರ ಮಾತಿಗೆ ಮಾತು ಬೆಳೆಸಿಕೊಳ್ಳದೆ ಶಾಂತಿಯಿಂದ ಕಾರ್ಯಕ್ರಮವನ್ನು ನಡೆಸುವಂತೆ ಸೂಚನೆ ನೀಡಿದರು.
ವೇದಿಕೆಯಲ್ಲಿ ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್‌ಐ ಸರಸ್ವತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖಂಡರುಗಳಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಸೋಮಶೇಖರ ಪೈಕ, ಹರಿಪ್ರಸಾದ್ ಎಲಿಮಲೆ, ಚಂದ್ರ ಕೋಲ್ಚಾರ್, ರಜತ್ ಅಡ್ಕಾರ್, ರಾಜೇಶ್ ಶೆಟ್ಟಿ ಮೇನಾಲ, ಸುರೇಶ್ ಕಣಿಮರಡ್ಕ, ಶಿವನಾಥ್ ರಾವ್ ಹಳೆಗೇಟು, ದೇವಿಪ್ರಸಾದ್ ಸುಳ್ಯ, ಯತೀಶ್ ರೈ ದುಗಲಡ್ಕ, ಬಾಲಚಂದ್ರ ಮರ್ಕಂಜ, ಶಿವಪ್ರಸಾದ್ ಕೆ, ವಿಖ್ಯಾತ್ ವಿ ಮರ್ಕಂಜ, ಸಂದೀಪ್ ಎಂ, ಸೇರಿದಂತೆ ೫೦ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.