ಅಸ್ತಿತ್ವ ಉಳಿಸಿಕೊಳ್ಳುವುದಕ್ಕೋಸ್ಕರ ಪ್ರತಿಭಟನೆ ಮಾಡುತ್ತಿದೆ : ಕಾಂಗ್ರೆಸ್ ಪ್ರತಿಕ್ರಿಯೆ
ಹರೀಶ್ ಕಂಜಿಪಿಲಿಯವರು ಮನೆಯ ಅಡಿಕೆ ಮಾರಿ ಪ್ರಚಾರ ಪಡೆದರೇ? : ಪಿ.ಸಿ., ಪಿ.ಎಸ್. ಪ್ರಶ್ನೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಬಲ್ ಇಂಜಿನ್ ಸರಕಾರದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಬಿಜೆಪಿಯವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ.
ಮುಂದಿನ ಲೋಕಸಭಾ ಚುನಾವಣಾ ದೃಷ್ಠಿಯಲ್ಲಿ ಪ್ರತಿಭಟನೆ ಮಾಡಿರುವುದೇ ಹೊರತು ರೈತರ ಹಿತದೃಷ್ಠಿಯಿಂದ ಅಲ್ಲ. ಪ್ರತಿಭಟನೆಯಲ್ಲಿ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಜರೆದ ಮತ್ತು ಜರೆಯುತ್ತಿರುವ ಬಿಜೆಪಿಗರು ಅದು ಸಮರ್ಪಕವಾಗಿ ಅನುಷ್ಠಾನಗೊಂಡಾಗ ಅದು ಜನರ ತೆರಿಗೆಯ ಹಣ ಎಂದು ಭಾಷಣ ಬಿಗಿಯುವುದು ಅವರ ಇಬ್ಬಂದಿ ತನಕ್ಕೆ ಸಾಕ್ಷಿಯಾಗಿದೆ.
ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಸರಕಾರದಿಂದ ಅನುದಾನಗಳನ್ನು ಮಂಜೂರು ಮಾಡಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ಸಚಿವರ ಭಾವಚಿತ್ರದೊಂದಿಗೆ ತಮ್ಮ ತಮ್ಮ ಫೋಟೊಗಳನ್ನು ಹಾಕಿ ಫ್ಲೆಕ್ಸ್‌ಗಳನ್ನು ಅಳವಡಿಸಿ ಪಕ್ಷದ ಬ್ಯಾನರ್‌ನಡಿಯಲ್ಲಿ ಕಾರ್ಯಕ್ರಮ ಆಯೋಜಿಸಿದಾಗ ಇದು ಜನರ ತೆರಿಗೆಯ ಹಣದಲ್ಲಿ ತಾನು ಪ್ರಚಾರ ಪಡೆಯುವುದು ತಪ್ಪು ಎಂಬ ಕನಿಷ್ಟ ಜ್ಞಾನವೂ ಅವರಿಗಿಲ್ಲದಾಯಿತೆ. ಈ ಪ್ರಚಾರಗಳೆಲ್ಲವೂ ಹರೀಶ್ ಕಂಜಿಪಿಲಿಯವರ ಮನೆಯಿಂದ ಅಡಿಕೆ – ರಬ್ಬರ್ ಮಾರಿ ಬಂದ ಹಣದಿಂದ ಕಾಮಗಾರಿ ನಡೆಸಿರುವುದೇ ಎಂಬುದರ ಬಗ್ಗೆ ಉತ್ತರಿಸಲಿ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮೂಗು ತೂರಿಸುವ ಮೊದಲು ತನ್ನ ಪಕ್ಷದಲ್ಲಿ ಮೊನ್ನೆ ನಡೆದ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಿಂದ ಹಿಡಿದು ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಾಮಾನದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.