ಗಾಂಧಿನಗರ ಕೆಪಿಎಸ್ ಶಾಲಾ ಮೈದಾನದಲ್ಲಿ ಸಂಚಾರಿ ವಿಜ್ಞಾನ ಪ್ರದರ್ಶನ

0

ಸುಳ್ಯ ತಾಲೂಕಿನ ವಿವಿಧ ಶಾಲೆಗಳ ಸಾವಿರಾರು ಮಂದಿ ವಿದ್ಯಾರ್ಥಿಗಳಿಂದ ವೀಕ್ಷಣೆ

ಶ್ರೀ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾಹಿತಿ ಕಾರ್ಯಕ್ರಮದ ಸಂಚಾರಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಸುಳ್ಯ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಇಂದು ಸುಳ್ಯದ ಗಾಂಧಿನಗರ ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯಿತು.

ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಿದಾನಂದ ಕಾಯರ್ತ್ತೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಶಾಲಾ ಮೈದಾನದಲ್ಲಿ ಈ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸಿದ ವಿಜ್ಞಾನ ಕೇಂದ್ರದ ಮುಖ್ಯಸ್ಥರಿಗೆ ಹಾಗೂ ಸುಳ್ಯ ಲಯನ್ಸ್ ಕ್ಲಬ್ಬಿನ ಸರ್ವ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪಗೌಡ ವೇದಿಕೆಯಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯರುಗಳಾದ ಪ್ರವಿತಾ ಪ್ರಶಾಂತ್, ಶರೀಫ್ ಕಂಠಿ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಸದಸ್ಯರುಗಳಾದ ರಾಮಕೃಷ್ಣರೈ, ವಿಲಿಯಂ ಲಸ್ರಾದೋ, ವಿಜ್ಞಾನ ಸಂಚಾರಿ ವಾಹನದ ಮುಖ್ಯಸ್ಥ ಹೇಮರಾಜ್, ಕೆಪಿಎಸ್ ಜೂನಿಯರ್ ಕಾಲೇಜ್ ಪ್ರಭಾರ ಪ್ರಾಂಶುಪಾಲ ರಾಜೇಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪದ್ಮನಾಭ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲೆ ಜ್ಯೋತಿ ಲಕ್ಷ್ಮಿ ಸ್ವಾಗತಿಸಿ ಶಿಕ್ಷಕ ಇಬ್ರಾಹಿಂ ನಿರೂಪಿಸಿ ಶಿಕ್ಷಕ ಚಿನ್ನಪ್ಪ ಗೌಡ ವಂದಿಸಿದರು.

ಬಳಿಕ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನದ ಸಂಚಾರಿ ವಾಹನದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಉಪಕರಣಗಳ ಮಂಡಲದಲ್ಲಿ ವೋಲ್ಟ್ ಮೀಟರ್ ಗಳ ಅಳವಡಿಕೆ, ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ತತ್ವ ಆದರಿಸಿ ಕೆಲಸ ಮಾಡುವ ಸಾಧನಗಳ ಮಾಹಿತಿ, ಸರಣಿ ಬಲ್ಬ್ಗಳಲ್ಲಿ ವಿದ್ಯುತ್ ಬಳಕೆ, ಗೃಹ ವಿದ್ಯುತ್ ಮಂಡಲಗಳಲ್ಲಿ ವಿದ್ಯುತ್ ಉಪಕರಣಗಳನ್ನು ಹೇಗೆ ಸಂಪರ್ಕಿಸುತ್ತಾರೆ ಮುಂತಾದ ವಿಷಯಗಳಲ್ಲಿ ಪ್ರಾತ್ಯಕ್ಷಿತ ಅರಿವು ಮಾಹಿತಿ ಕಾರ್ಯ ನಡೆಯಿತು.
ಸಂಸ್ಥೆಯ ಮುಖ್ಯಸ್ಥ ಹೇಮರಾಜ್ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಳ್ಯ ತಾಲೂಕಿನ ವಿವಿಧ ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.

ಪ್ರಾಜೆಕ್ಟ್ ಕೋರ್ಡಿನೇಟರ್ ವಿಲಿಯಂ ಲಸ್ರಾದೋ ಈ ಸಂದರ್ಭದಲ್ಲಿ ಮಾಹಿತಿ ನೀಡಿ ಇಂದು ಮತ್ತು ನಾಳೆ ಸಂಜೆವರೆಗೆ ಈ ವಾಹನ ಗಾಂಧಿನಗರ ಶಾಲಾ ಮೈದಾನದಲ್ಲಿ ಇದ್ದು ಸ್ಥಳೀಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.