ಒಂದೇ ಬ್ಯಾಟರಿ ಉಪಯೋಗಿಸಿ ವಿವಿಧ ಕೃಷಿ ಉಪಕರಣ ಚಾಲೂ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ದ.ಕ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಂಜದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನೇತೃತ್ವದಲ್ಲಿ ನಡೆಯಿತು. ಶಿರಸಿಯ ಅಮೋಘ ಇ ಮೋಟರ್ಸ್ ಸಂಸ್ಥೆಯ ಸಿಬಂದಿಗಳು ಪ್ರಾತ್ಯಕ್ಷಿಕೆ ನಡೆಸಿದರು.
ಬ್ಯಾಟರಿ ಚಾಲಿತ ವಾಹನಗಳು ಕೃಷಿಯಲ್ಲೂ ಬಳಕೆಗೆ ಅನಿವಾರ್ಯ ಎಂಬ ಅಂಶವನ್ನು ಮನಗಂಡು ಅಮೋಘ ಇ ಮೋಟರ್ಸ್ ಸಂಸ್ಥೆಯ ಸಂತೋಷ್ ಹೆಬ್ಬಾರ್ ಅವರು ಕಳೆದ 3 ವರ್ಷಗಳಿಂದ ಆವಿಷ್ಕಾರ ನಡೆಸಿ ಇದೀಗ ಇ ಕಾರ್ಟ್ ವಾಹನಗಳನ್ನು ಕೃಷಿಕರಿಗಾಗಿ ತಯಾರಿಸಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ರೈತರಿಗೆ ನೀಡಿದ್ದಾರೆ. ಬ್ಯಾಟರಿ ಮೂಲಕ ಎಚ್‌ಡಿಪಿ ಸ್ಪ್ರೇಯರ್, ಟ್ರಾಲಿ, ಮರ ತುಂಡರಿಸುವ ಯಂತ್ರ, , ಕಳೆ ಕತ್ತರಿಸುವ ಯಂತ್ರ, ಮಿನಿ ಟಿಲ್ಲರ್, ಗ್ರೈಂಡಿಂಗ್ ಯಂತ್ರ ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಯಂತ್ರಗಳನ್ನು ಒಂದು ದಿನದ ಬ್ಯಾಟರಿ ಬ್ಯಾಕ್‌ಅಪ್ ನೊಂದಿಗೆ ಚಾಲೂ ಮಾಡುವಂತೆ ಆವಿಷ್ಕಾರವನ್ನು ಮಾಡಿದ್ದಾರೆ. ಇ ಕಾರ್ಟ್ ಮೂಲಕ ಸುಮಾರು 6 ಕ್ವಿಂಟಾಲ್ ಭಾರವನ್ನು ಹೊತ್ತೊಯ್ಯುವ ವಾಹನವನ್ನೂ ತಯಾರಿಸಿದ್ದಾರೆ.
ಪಂಜದ ನಾಗಮಣಿ ಕೆದಿಲ ಅವರ ತೋಟದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನೇತೃತ್ವದಲ್ಲಿ ನಡೆದ ಪ್ರಾತ್ಯಕ್ಷಿಕೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಅವರು ಉದ್ಘಾಟಿಸಿ, “ಕೃಷಿಯಲ್ಲಿ ಯಂತ್ರಗಳ ಬಳಕೆ, ಹೊಸ ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿದೆ. ಭವಿಷ್ಯದ ಯುವ ಕೃಷಿಕರಿಗೆ ಹೊಸ ತಂತ್ರಜ್ಞಾನಗಳನ್ನು ತಂದಿಡಲು ಯುವಕರೇ ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ಇಂತಹ ಯಂತ್ರಗಳಲ್ಲಿ ಹೊಸತನವನ್ನು ತರಲು, ಸುಧಾರಣೆಯನ್ನು ತರಲು ಕೃಷಿಕರು ಸಕಾರಾತ್ಮವಾದ ಅಭಿಪ್ರಾಯವನ್ನು ತಿಳಿಸುವುದರ ಜೊತೆಗೆ ಆವಿಷ್ಕಾರಗಳು ಇನ್ನಷ್ಟು ನಡೆಯುವಂತಾಗಬೇಕು” ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಮಾತನಾಡಿ “ರೈತ ಉತ್ಪಾದಕ ಕಂಪನಿಯು ರೈತರಿಗೆ ಅನುಕೂಲವಾಗುವ ಯಂತ್ರಗಳು, ಸುಲಭ ಸಾಧನಗಳು, ಕೃಷಿಯಲ್ಲಿ ಹೊಸತನದ ಬಗೆಗಿನ ಅರಿವನ್ನು ತೆರೆದಿಡುವ ಕೆಲಸ ಮಾಡುತ್ತಿದೆ. ಕೃಷಿಕರು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿಸುವಲ್ಲಿ ರೈತ ಉತ್ಪಾದಕ ಸಂಸ್ಥೆ ಪಂಜದಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದೆ ಅಲ್ಲದೇ ಮಣ್ಣು ಪರೀಕ್ಷೆ, ಸಲಹೆ, ಸಾವಯವ, ರಾಸಾಯನಿಕ ಗೊಬ್ಬರ ಸೇರಿದಂತೆ ಕೃಷಿ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.
ಅಮೋಘ ಇ ಮೋಟರ್ಸ್ ಸಂಸ್ಥೆಯ ಸಂತೋಷ್ ಹೆಬ್ಬಾರ್ ಮಾತನಾಡಿ, ಕೃಷಿ ಕುಟುಂಬದಿಂದ ಬಂದಿದ್ದು ಇಂಜಿನಿಯರ್ ಆಗಿ ರೈತರಿಗೆ ಅನುಕೂಲವಾಗುವ ಕೆಲಸ ಸತತ ಪ್ರಯತ್ನದ ಮೂಲಕ ಮಾಡಿದ್ದೇವೆ. ರೈತರ ಅಭಿಪ್ರಾಯ ಸಲಹೆ,ಸೂಚನೆಗಳನ್ನು ಪಡೆದುಕೊಂಡು ಮುಂದೆ ಹೊಸ ಆವಿಷ್ಕಾರ ಹಾಗೂ ಅಭಿವೃದ್ಧಿಗಳನ್ನು ಮಾಡಲಿದ್ದೇವೆ ಎಂದರು.
ದೇವಸ್ಯ ಕಮ್ಯುನಿಕೇಶನ್ ಮಾಲಕ ಜಯಂತ್ ದೇವಸ್ಯ ಮಾತನಾಡಿ, ಕಳೆದ ಕೆಲ ಸಮಯಗಳಿಂದ ಬ್ಯಾಟರಿ ಚಾಲಿತ ವಾಹನ, ಉಪಕರಣಗಳನ್ನು ನಾವು ಬಳಕೆ ಮಾಡುತ್ತಿದ್ದೇವೆ. ಒಂದೇ ಬ್ಯಾಟರಿ ಬಳಸಿಕೊಂಡು ಸ್ಕೂಟರ್ ಹಾಗೂ ಕೃಷಿಯ ಎಲ್ಲಾ ಉಪಕರಣ ಚಾಲೂ ಮಾಡಲು ಸಾಧ್ಯವಿದೆ ಎಂದರು.
ವೇದಿಕೆಯಲ್ಲಿ ಕೃಷಿಕರಾದ ಶ್ರೀಮತಿ ಗಿರಿಜ ಕೆದಿಲ ಉಪಸ್ಥಿತರಿದ್ದರು. ಪ್ರಾತ್ಯಕ್ಷಿಕೆಯಲ್ಲಿ ಸುಳ್ಯ, ಕಡಬ ಪುತ್ತೂರು ತಾಲೂಕಿನ ನೂರಾರು ಕೃಷಿಕರು ಭಾಗವಹಿಸಿದರು.
ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಸ್ವಾಗತಿಸಿ ಸಿ.ಇ.ಒ. ಜೀವನ್ ಶೆಟ್ಟಿಗದ್ದೆ ವಂದಿಸಿದರು.