ರಾಮ ಮಂದಿರಕ್ಕೆ ಶುಭ ಕೋರುವ ಬ್ಯಾನರ್ ಹರಿದ ಪ್ರಕರಣ

0

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸುಳ್ಯದಲ್ಲಿ ರಾಮ ಭಕ್ತರ ಪ್ರತಿಭಟನೆ

ಶೀಘ್ರವೇ ಆರೋಪಿಗಳ ಬಂಧನ : ಪೊಲೀಸ್ ಅಧಿಕಾರಿಗಳ ಭರವಸೆ

ಸುಳ್ಯ ಜಾತ್ರೋತ್ಸವ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾ ದಿನಕ್ಕೆ ಶುಭ ಕೋರಿ ಸುಳ್ಯದ ರಿಕ್ಷಾ ಯೂನಿಯನ್‌ನವರು ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಿದ ಫ್ಲಕ್ಸ್ ಬ್ಯಾನರ್ ನ್ನು ಹರಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಹಾಗೂ ಬಂಧಿಸಲು ವಿಫಲವಾದ ಪೊಲೀಸ್ ಇಲಾಖೆಯ ವಿರುದ್ಧ ಸುಳ್ಯದ ರಾಮ ಭಕ್ತರು ಇಂದು ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಧರ್ಮ ರಕ್ಷಣೆ ನಮ್ಮ ಹೊಣೆ : ಭಾಗೀರಥಿ ಮುರುಳ್ಯ

ಪ್ರತಿಭಟನೆಯನ್ನುದ್ಧೇಶಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು, ಒಳ್ಳೆಯ ಕಾರ್ಯಕ್ಕೆ ಹಾಕಿದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡಿವೆ ಎನ್ನುವುದನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಸುಳ್ಯ ಸೂಕ್ಷ್ಮ ಪ್ರದೇಶ. ಇಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ನಮ್ಮ ಮತ್ತು ಪೊಲೀಸ್ ಇಲಾಖೆಯ ಕರ್ತವ್ಯ. ಧರ್ಮ ಬದುಕಿಗಾಗಿ ಇರುವಂತದ್ದು. ಹಾಗಾಗಿ ಧರ್ಮದ ರಕ್ಷಣೆ ಎಂದರೆ ನಮ್ಮ ರಕ್ಷಣೆ ಕೂಡಾ ಎಂದ ಶಾಸಕರು ಇಲಾಖೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತ ಅಪರಾಧಿ ಕೃತ್ಯಗಳ ಆರೋಪಿಗಳ ಬಂಧನ ಆಗದಿದ್ದಾಗ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೆ ಅವರು ಆಸ್ಪದ ಮಾಡಿಕೊಡಬಾರದು. ಜಾಲ್ಸೂರು, ಕನಕ ಮಜಲು ಪ್ರದೇಶಗಳಲ್ಲಿ ನಡೆದ ಹಲವು ಕಳ್ಳತನ ಪ್ರಕರಣದ ಆರೋಪಿಗಳ ಬಂಧನವೂ ಆಗಿಲ್ಲ. ಈ ಎಲ್ಲ ಪ್ರಕರಣಗಳನ್ನು ಬೇಧಿಸಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿಸಬೇಕು ಎಂದು ಹೇಳಿದರು.

ಮೂರು ದಿನಗಳೊಳಗೆ ಬಂಧನ ಆಗದಿದ್ದರೆ ಸುಳ್ಯ ಬಂದ್: ಕಂಜಿಪಿಲಿ

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ವಿಕೃತ ಮನಸ್ಸಿನವರು ನಡೆಸಿದ ಕೃತ್ಯ ಇದು. ಸುಳ್ಯ ಶಾಂತಿಯ ಊರು ಹೌದು. ಆದರೆ ಹಿಂದುತ್ವಕ್ಕೆ ಧಕ್ಕೆ ಬಂದಾಗ ಹೋರಾಟ ಮಾಡಿದ ಇತಿಹಾಸವೂ ಈ ನೆಲಕ್ಕಿದೆ. ಪೇಜಾವರ ಸ್ವಾಮಿಗಳ ಕಾರಿಗೆ ಕಲ್ಲು ಬಿದ್ದ ಸಂದರ್ಭದಲ್ಲಿ ಸುಳ್ಯದಲ್ಲಿ ಆದ ಘಟನೆಗಳೇನು ಎನ್ನುವುದು ನಮಗೆಲ್ಲಾ ಗೊತ್ತಿದೆ. ಬ್ಯಾನರ್ ಹರಿದ ಕೃತ್ಯವನ್ನು ಒಂದೋ ಮತಿ ಹೀನರು ಮಾಡಿರಬೇಕು. ಅಥವಾ ಮತಾಂಧ ಬ್ಯಾರಿಗಳು ಮಾಡಿರಬೇಕು, ಇಲ್ಲವೇ ಮತಾಂಧ ಬ್ಯಾರಿಗಳಿಗೆ ಹುಟ್ಟಿದ ಹಿಂದೂಗಳು ಮಾಡಿರಬೇಕು. ಯಾರೇ ಮಾಡಿದರೂ ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಆರೋಪಿಗಳನ್ನು ಮೂರು ದಿನಗಳೊಳಗೆ ಇಲಾಖೆ ಬಂಧಿಸಬೇಕು. ಈ ಕೃತ್ಯಕ್ಕೆ ಪ್ರೇರೇಪಣೆ ನೀಡಿದವರನ್ನೂ ಬಂಧಿಸಬೇಕು. ಇಲ್ಲದಿದ್ದರೆ ತಾಲೂಕು ಬಂದ್‌ಗೆ ಕರೆ ಕೊಡುತ್ತೇವೆ ಎಂದು ಹರೀಶ್ ಕಂಜಿಪಿಲಿ ಹೇಳಿದರು.

ಸುಳ್ಯ ಜಾತ್ರೆಗೆ ಮುನ್ನ ಆರೋಪಿಗಳಿಗೆ ಶಾಸ್ತಿಯಾಗಲಿ : ಎನ್.ಎ.

ಬಿಜೆಪಿ ಹಿರಿಯ ನಾಯಕ ಎನ್.ಎ.ರಾಮಚಂದ್ರ ಮಾತನಾಡಿ, ನಾವೆಲ್ಲಾ ಕಷ್ಟದಿಂದ ಕರಸೇವೆ ಮಾಡಿದ್ದೇವೆ. ಈಗ ನಮ್ಮೆಲ್ಲರ ಶ್ರದ್ಧಾ ಭಕ್ತಿಯ ರಾಮಂದಿರ ನಿರ್ಮಾಣವಾಗಿ ಉದ್ಘಾಟನೆಯ ಭಾಗ್ಯ ನೋಡುವಂತಾಗಿದೆ. ಇದರ ಬ್ಯಾನರ್ ಗೆ ಹಾನಿ ಮಾಡಿರುವ ಘಟನೆ ಖಂಡನೀಯ. ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆಯ ವಿರುದ್ಧವಲ್ಲ. ಹಿಂದೂಗಳಿಗೆ, ಹಿಂದೂ ಸಂಘಟನೆಗಳಿಗೆ ತೊಂದರೆಯಾಗದಂತೆ ನೀವೂ ಕಾರ್ಯನಿರ್ವಹಿಸಬೇಕು ಎಂಬುದೇ ನಮ್ಮ ಮನವಿ ಎಂದು ಹೇಳಿದರು.

ಸುಳ್ಯ ಜಾತ್ರೆಗೆ ಮೊದಲು ಆರೋಪಿಗಳನ್ನು ಬಂಧಿಸಿ ಮೆರವಣಿಗೆ ಮಾಡಿ. ಮಿತ್ತೂರು ಭಂಡಾರ ಬರುವ ಮುನ್ನ ಆರೋಪಿಗಳಿಗೆ ಶಾಸ್ತಿಯಾಗಲಿ ಎಂದು ಎನ್.ಎ.ರಾಮಚಂದ್ರ ಹೇಳಿದರು.

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತದೆ ಎಂಬ ಸಂತೋಷದಲ್ಲಿ ನಾವಿರುವಾಗ ಇಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧಿ ಕೃತ್ಯ ನಡೆದಿದೆ. ನಮಗೆ ಇಲಾಖೆಯ ಮೇಲೆ ವಿಶ್ವಾಸವಿದೆ. ಅವರು ನೈಜ ಆರೋಪಿಗಳನ್ನು ಬಂಧಿಸಬೇಕು ಎಂಬುದೇ ನಮ್ಮ ಆಗ್ರಹ. ಯಾವ ಉದ್ಧೇಶದಿಂದ ಕೃತ್ಯ ಮಾಡಿದರೂ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಹಿಂದೆ ಇಲ್ಲಿ ಬೇರೆ ಬೇರೆ ಘಟನಾವಳಿಗಳು ನಡೆದದ್ದು ಗೊತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲೂ ಆರೋಪಿಗಳು ಸುಳ್ಯದವರಾಗಿದ್ದರು ಎನ್ನುವುದು ಗೊತ್ತಿರುವ ಸಂಗತಿ. ಮತಾಂತರದಂತಹ ಕೃತ್ಯ ನಡೆದಾಗ ಇಲ್ಲಿ ಬೃಹತ್ ಹಿಂದೂ ಶಕ್ತಿ ಸೇರಿ ಪ್ರತಿಭಟಿಸಿದ ಇತಿಹಾಸವಿದೆ ಎಂದು ಹೇಳಿದರು.

ಹಿಂದೂ ಸಂಘಟನೆ ನಾಯಕ ಜಿ.ಜಿ. ನಾಯಕ್ ಮಾತನಾಡಿ, ಇತಿಹಾಸದ ತಪ್ಪುಗಳನ್ನು ತಿದ್ದುವ ಪರಿವರ್ತನೆಯ ಕಾಲದಲ್ಲಿ ದೇಶ ಇದೆ. ಹಿಂದೂ ವಿರೋಧಿಗಳಿಗೆ ಸಾಲು ಸಾಲು ಸೋಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಅವರು ತಾಕತ್ತಿದ್ದರೆ ಜೀವವಿರುವ ನಮ್ಮಂತವರ ಮೈಮುಟ್ಟಿ ನೋಡಲಿ. ಉತ್ತರ ಕೊಡುತ್ತೇವೆ ಎಂದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಲತೀಶ್ ಗುಂಡ್ಯ ಮಾತನಾಡಿ, ನಿನ್ನೆ ಬೆಳಿಗ್ಗೆ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಬೇಕೆನ್ನುವುದು ನಮ್ಮ ಆಗ್ರಹವಾಗಿತ್ತು. ಅದು ಆಗದ ಕಾರಣ ಪ್ರತಿಭಟನೆ ನಡೆಸಿದ್ದೇವೆ. ಸುಳ್ಯದಲ್ಲಿ ಯಾವುದೇ ಹಿಂದೂ ವಿರೋಧಿ ಕೃತ್ಯ ನಡೆದರೂ ಸಹಿಸುವುದಿಲ್ಲ ಎಂದು ಹೇಳಿದರು.

ಸೋಮಶೇಖರ ಪೈಕ, ಸುಭೋದ್ ಶೆಟ್ಟಿ ಮೇನಾಲ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ವರ್ಷಿತ್ ಚೊಕ್ಕಾಡಿ, ಹರಿಪ್ರಸಾದ್ ಎಲಿಮಲೆ, ಡಾ. ಮನೋಜ್ ಅಡ್ಡಂತಡ್ಕ, ಶಶಿಕಲಾ ನೀರಬಿದಿರೆ, ಚಂದ್ರಶೇಖರ ಅಡ್ಪಂಗಾಯ, ಸುನಿಲ್ ಕೇರ್ಪಳ, ಕೇಶವ ನಾಯಕ್ ಸುಳ್ಯ ಪ್ರಬೋದ್ ಶೆಟ್ಟಿ ಮೇನಾಲ,
ಸನತ್ ಚೊಕ್ಕಾಡಿ, ನಿಕೇಶ್ ಉಬರಡ್ಕ, ಚಿದಾನಂದ ವಿದ್ಯಾನಗರ, ಚನಿಯ ಕಲ್ತಡ್ಕ, ಅಶೋಕ್ ಅಡ್ಕಾರು, ಬಾಲಗೋಪಾಲ‌ ಸೇರ್ಕಜೆ, ಕಿಶೋರಿ ಶೇಟ್ಶೀ ಲಾ ಅರುಣ್ ಕುರುಂಜಿ, ಪೂಜಿತಾ ಕೇರ್ಪಳ, ನವೀನ್ ಎಲಿಮಲೆ, ಪ್ರವೀಣ ರಾವ್, ಗುರುದತ್ ಶೇಟ್, ಗಿರೀಶ್ ಕಲ್ಲಗದ್ದೆ ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಅಧಿಕಾರಿಗಳು

ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಅಲ್ಲಿಗೆ ಬಂದ ಸುಳ್ಯ ಎಸ್‌ಐ ಈರಯ್ಯ ದೂಂತೂರು ಅವರು, ಪ್ರಕರಣದ ಆರೋಪಿಯನ್ನು ಬಂಧಿಸುವ ಪ್ರಯತ್ನದಲ್ಲಿ ಇಲಾಖೆ ಇದೆ. ಸಿಸಿ ಟಿವಿ ಮೂಲಕ ಬಹುತೇಕ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಹಾಗಾಗಿ ಪ್ರತಿಭಟನೆ ನಡೆಸಬೇಡಿ. ಪ್ರತಿಭಟನೆ ನಡೆಸಲು ನೀವು ಅನುಮತಿ ಕೂಡಾ ಪಡೆದಿಲ್ಲ ಎಂದು ಹೇಳಿದಾಗ, ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು. ಆರೋಪಿಗಳ ಕುರಿತು ಮಾಹಿತಿ ಇದ್ದರೆ ಅದನ್ನು ಪ್ರತಿಕಾ ಹೇಳಿಕೆ ನೀಡಿ. ನಾವು ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇವೆ ಎಂದು ಲತೀಶ್ ಗುಂಡ್ಯ ಹೇಳಿದರು. ಸ್ವಲ್ಪ ಹೊತ್ತು ಅವರೊಳಗೆ ಮಾತುಕತೆ ನಡೆದ ಬಳಿಕ ಪ್ರತಿಭಟನೆ ಮುಂದುವರಿಯಿತು.

ಪ್ರತಿಭಟನೆಯ ಕೊನೆಯಲ್ಲಿ ಪ್ರತಿಭಟನಾಕಾರರ ಬಳಿ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಮೋಹನ್ ಕೊಠಾರಿ ಹಾಗೂ ಎಸ್ ಐ ಈರಯ್ಯರವರರು ಈಗಾಗಲೇ ಸಾರ್ವಜನಿಕರು ನೀಡಿದ ಮಾಹಿತಿ ಮತ್ತು ಸಿಸಿ ಟಿವಿ ಫೂಟೇಜ್‌ಗಳ ಮಾಹಿತಿಯನ್ವಯ ಆ ಸಮಯಗಳನ್ನು ಮ್ಯಾಚ್ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಶೇ.90ರಷ್ಟು ಆಗಿದೆ ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.