ಸುಳ್ಯದಲ್ಲಿ ಪೊಲೀಸ್ ಇಲಾಖೆಯಿಂದ ವಾಹನಗಳ ಬಿಗು ತಪಾಸಣೆ

0

ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ

ಕಳೆದ ಕೆಲವು ದಿನಗಳಿಂದ ಸುಳ್ಯದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ದ್ವಿಚಕ್ರ ವಾಹನಗಳ ಅಪಘಾತಗಳು ಹೆಚ್ಚಾಗಿ ಸವಾರರು ಮೃತ ಪಡುತ್ತಿರುವ, ಗಂಭೀರ ಗಾಯಗೊಳ್ಳುತ್ತಿರುವ ಘಟನೆ ಹೆಚ್ಚಾಗಿ ಕಂಡು ಬರುತ್ತಿದೆ.


ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಕಳೆದ ಎರಡು ದಿನಗಳಿಂದ ವಾಹನ ತಪಾಷಣೆ ಮತ್ತು ರಸ್ತೆ ಸಂಚಾರ ನಿಯಮದ ಬಗ್ಗೆ ಬಿಗಿ ತಪಾಸಣೆ ಕೈಗೊಂಡಿದ್ದು ಹತ್ತಾರು ವಾಹನಗಳಿಗೆ ದಂಡವನ್ನು ವಿಧಿಸಲಾಗಿದೆ.

ಅದರಲ್ಲಿ ಹೆಚ್ಚಾಗಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು,ಸೀಟ್ ಬೆಲ್ಟ್ ಧರಿಸದೆ ಕಾರು ಇನ್ನಿತರ ವಾಹನ ಚಾಲನೆ ಮಾಡುವುದು, ವಾಹನ ಚಾಲನಾ ಪರವಾನಿಗೆ ಇಲ್ಲದೆ ಇರುವುದು, ಸಂಚಾರಿ ನಿಯಮವನ್ನು ಪಾಲಿಸದೆ ಇರುವ ಮುಂತಾದ ವಿಷಯಗಳು ಕುರಿತು ದಂಡವನ್ನು ವಿಧಿಸಲಾಗಿದೆ.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತ್ಯನಾರಾಯಣರು, ವಾಹನ ತಪಾಸಣೆ ಮಾಡುವುದು ಮತ್ತು ದಂಡ ಏರುವುದು ವಾಹನ ಚಾಲಕರ ರಕ್ಷಣೆ ಮತ್ತು ಜಾಗೃತಿ ಮೂಡಿಸಲು ಆಗಿದ್ದು ಪ್ರತಿಯೊಬ್ಬರು ಸಂಚಾರ ನಿಯಮವನ್ನು ಪಾಲಿಸಬೇಕೆಂದು ಹೇಳಿದರು. ಇಲ್ಲದಿದ್ದಲ್ಲಿ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.