ಮೇ 21 ರಂದು ಶ್ರೀ ಕೇಶವ ಕೃಪಾ ವೇದ-ಯೋಗ- ಕಲಾ ಶಿಬಿರ 2024 ರ ಸಮಾರೋಪ

0

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಸಾಧಕರಿಗೆ ಶ್ರೀ ಕೇಶವ ಸ್ಮೃತಿ 2024 ಪ್ರಶಸ್ತಿ ಪ್ರದಾನ: ಪುರೋಹಿತ ನಾಗರಾಜ ಭಟ್

ಸುಳ್ಯ ಹಳೆಗೇಟು ವಿದ್ಯಾನಗರ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ರಿ. ಇದರ ಆಶ್ರಯದಲ್ಲಿ ನಡೆದ ಶ್ರೀ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರ ೨೦೨೪ರ ಸಮಾರೋಪ ಸಮಾರಂಭ ಹಾಗೂ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ ೧೯ರಂದು ವಿದ್ಯಾನಗರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ವೇದಗಳು ಪ್ರಾಚೀನ ಕಾಲದಿಂದಲೇ ಈ ನಾಡಿನುದ್ದಕ್ಕೂ ಹರಿಯುತ್ತಿರುವ ನಿತ್ಯ ನಿರಂತರ ಸಾಂಸ್ಕೃತಿಕ ಪ್ರವಾಹವಾಗಿದೆ. ವೇದ ಸಾಹಿತ್ಯವು ಮಾನವೀಯ ಮೌಲ್ಯಗಳ ಗರ್ಭ, ಪರಂಪರೆಯ ಆಸ್ತಿ. ವೇದೋಪನಿಷತ್ತುಗಳ ಆಲೋಚನೆಗಳು ಮನಸ್ಸಿನ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸುವ ಅಂತರಗಂಗೆ. ವೇದಗಳ ಆಳದಲ್ಲಿ ಘನತೆವೆತ್ತ ಭಾರತದ ಪರಿಚಯವಿದೆ. ಭಾವೀ ಭಾರತದ ಸೂರ್ಯಸ್ಪಷ್ಟ ನೋಟವಿದೆ. ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಭಾರತವನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವ ಸ್ವಾಭಿಮಾನದ ಪಾಠವು ಇದೆ. ಆದುದರಿಂದ ವೇದಗಳು ರಾಷ್ಟ್ರಜೀವನದ ಅವಿಭಾಜ್ಯ ಅಂಗ ಎಂದು ಹೇಳಿದರು.

ಈ ಎಲ್ಲಾ ದೃಷ್ಟಿಯಿಂದ ‘ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ವು ಕಳೆದ ೨೩ ವರುಷಗಳಿಂದ ನಡೆಸುತ್ತಿರುವ ವೇದ-ಯೋಗ-ಕಲಾ ಶಿಬಿರವು ಋಷಿ ಕಾಲದ ಗುರುಕುಲದ ಮಾದರಿಯನ್ನೂ ಪರಿಚಯಿಸುತ್ತದೆ. ಕಾಲದ ವಾಯುವೇಗದ ಬೆಳವಣಿಗೆಗಳಿಗೂ ಪರಂಪರೆಗೆ ಗಾಯವಾಗದ ರೀತಿಯಲ್ಲಿ ಒಗ್ಗಿಕೊಳ್ಳುತ್ತದೆ. ವೇದ ಮಂತ್ರಗಳ ಅನುರಣನಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತದ ದರ್ಶನವನ್ನು ಮಾಡಿಕೊಳ್ಳುವ ಮೂಲಕ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಹಾಡು-ಕುಣಿತ, ರಂಗಭೂಮಿ, ಚಿತ್ರಕಲೆ, ಅಭಿನಯಗೀತೆಗಳು, ಜಾದೂ, ಪೇಪರ್ ಕಟ್ಟಿಂಗ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಜು ತರಬೇತಿ, ಭಜನೆ, ಶ್ಲೋಕ, ವೇದಪಾಠ ಮುಂತಾದ ಕಾರ್ಯಕ್ರಮಗಳಲ್ಲಿ ಶಿಬಿರದ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಭಾರತೀಯ ಜೀವನಪದ್ಧತಿಯ ಆರೋಗ್ಯಕರ ಬದುಕಿನ ಪಯಣವನ್ನೂ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ.

ಹೊಸಚಿಗುರಿನ ಮೂಲಕ ಹಳೆಬೇರಿನ ಹಿರಿಮೆಯನ್ನು ಸಾರಿ ಹೇಳುವ ವಿಭಿನ್ನ ಆಯಾಮ ನಮ್ಮ ಪ್ರತಿಷ್ಠಾನದ ಆಯ್ಕೆಯಾಗಿದ್ದು ಇದುವರೆಗೂ ನಮ್ಮಲ್ಲಿ ತಯಾರಾದ ಸಾವಿರಾರು ಹೆಮ್ಮೆಯ ವಿದ್ಯಾರ್ಥಿಗಳಿಗೆ ಶಿಬಿರದ ಬಗೆಗಿನ ಇನ್ನಷ್ಟು ನಿರೂಪಣೆ, ಸಂಗತಿಗಳಿಗೆ ಸಂಪೂರ್ಣ ಅಧ್ಯಯನದೊಂದಿಗೆ ಸಮಾಜಮುಖಿಗಳಾಗಿರುವ ವೈದಿಕ ವಿದ್ವಾಂಸರು, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕಲಾವಿದರು ಮತ್ತು ನಾಲ್ಕು ಒಳ್ಳೆಯ ನಗುಮುಖದ ಮಾತುಗಳೊಂದಿಗೆ ಪ್ರತಿಷ್ಠಾನದ ಪ್ರತೀ ಹೆಜ್ಜೆಯನ್ನೂ ಪ್ರೋತ್ಸಾಹಿಸುತ್ತಿರುವ ಸಮಾಜದ ಸಜ್ಜನಬಳಗವೇ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ಸಮರ್ಪಿಸಲು ಧೈರ್ಯ ತುಂಬುವ ಸಂಪನ್ಮೂಲವಾಗಿದೆ ಎಂದು ಹೇಳಿದರು.


ಕೇಶವ ಕಿರಣ ಸಭಾಂಗಣದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ ಇವರು ಆಶೀರ್ವಚನ ನೀಡಲಿದ್ದು ಅಧ್ಯಕ್ಷತೆಯನ್ನು ಸುಳ್ಯ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷರು ಶ್ರೀಕೃಷ್ಣ ಸೋಮಯಾಗಿ ಎಂ ಎನ್ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಸನ್ಮಾನಿತ ಗೊಳ್ಳಲಿರುವ ಸಾಧಕರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದ್ವೇಶ ಡಾ. ಮುರುಳಿ ಮೋಹನ ಚೂಂತಾರು ದಂತ ವೈದ್ಯರು ನೆರವೇರಿಸಲಿದ್ದು ಅಭಿನಂದನೆ ಹಾಗೂ ಸಮಾಪನ ಭಾಷಣವನ್ನು ಖ್ಯಾತ ಯಕ್ಷಗಾನ ಅರ್ಥದಾರಿ ಉಜಿರೆ ಅಶೋಕ ಭಟ್ ಮಾಡಲಿದ್ದಾರೆ.
ಈ ಬಾರಿ ೨೦೨೪ರ ಕೇಶವ ಸ್ಮೃತಿ ಪ್ರಶಸ್ತಿ ಪುರಸ್ಕಾರವನ್ನು ವೇದ ವಿದ್ವಾಂಸರಾದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ, ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ, ಸಂಗೀತ ಶಿಕ್ಷಕಿ ಶ್ರೀಮತಿ ರೇಖಾ ರೇವತಿ ಹೊನ್ನಡಿ ಪಡೆಯಲಿದ್ದಾರೆ.
ಅಲ್ಲದೆ ಸಮಾರಂಭದಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಿವಿಧ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಹಿರಿಯ ವೇದ ಗುರು ಸುದರ್ಶನ್ ಭಟ್ ಉಜಿರೆ, ಅಭಿರಾಮ್ ಭಟ್ ಸರಳಿ ಕುಂಜ, ಪ್ರತಿಷ್ಠಾನದ ಪ್ರಬಂಧಕ ಅಕ್ಷತಾ ನಾಯಕ್ ಹಳೆಗೇಟು ಉಪಸ್ಥಿತರಿದ್ದರು.