ಸಂಪಾಜೆ ಕೆನರಾ ಬ್ಯಾಂಕ್ ನಲ್ಲಿ ಧರಣಿ ಕುಳಿತ ಗ್ರಾಹಕ !

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿರುವ ಕೆನರಾ ಬ್ಯಾಂಕಿನಿಂದ ಪಡೆಯಲಾದ ಶೈಕ್ಷಣಿಕ ಸಾಲಕ್ಕೆ ಜಾಮೀನು ಹಾಕಿದ್ದ ಕೆ.ಪಿ.ಜಾನಿ ಅವರಿಗೆ ಬ್ಯಾಂಕಿನಿಂದ ಸೌಲಭ್ಯ ನೀಡದ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆ.ಪಿ. ಜಾನಿಯವರು ಬ್ಯಾಂಕಿನವರಲ್ಲಿ ಇದನ್ನು ಪ್ರಶ್ನಿಸಿ, ಬ್ಯಾಂಕ್ ಒಳಗೆ ಧರಣಿ ಕುಳಿತ ಘಟನೆ ಇಂದು ನಡೆಯಿತು.

2016ರಲ್ಲಿ ಬಡ ಕುಟುಂಬದ ಹೆಣ್ಣು ಮಗಳೊಬ್ಬಳಿಗೆ ಎಜುಕೇಶನ್ ಲೋನಿಗೆ ಸಂಬಂಧಿಸಿದಂತೆ ಕೆ.ಪಿ. ಜಾನಿ ಅವರು ಜಾಮೀನು ಹಾಕಿದ್ದರು. ಇದೀಗ ಆಕೆಯ ವಿದ್ಯಾಭ್ಯಾಸ ಪೂರ್ಣಗೊಂಡಿದ್ದು , ಆದರೆ ಕೆನರಾ ಬ್ಯಾಂಕ್ ನಲ್ಲಿ ಮಾಡಿದ ಸಾಲವನ್ನು ಮನೆಯವರು
ಕಟ್ಟಲು ಆಗದಿರುವುದರಿಂದ ಮೇಲಿಂದ ಮೇಲೆ ವಿದ್ಯಾರ್ಥಿನಿಯ ಮನೆಗೆ ನೋಟಿಸ್ ಬಂದಿತ್ತು. ಕೊನೆಗೆ ವನ್ ಟೈಮ್ ಸೆಟ್ಲ್ ಮೆಂಟ್ ಅವಕಾಶದಲ್ಲಿ ಅವರು ರಿಯಾಯಿತಿ ದರದಲ್ಲಿ ಸಾಲ ಕಟ್ಟಿದ್ದರು.

ಈ ವಿಚಾರ ಜಾಮೀನು ನೀಡಿದ ಕೆ.ಪಿ ಜಾನಿ ಅವರಿಗೆ ಗೊತ್ತಿರಲಿಲ್ಲವೆನ್ನಲಾಗಿದೆ . ಇತ್ತೀಚೆಗೆ ಕೆಲಸದ ನಿಮಿತ್ತ ಕೆ.ಪಿ. ಜಾನಿಯವರು ಬ್ಯಾಂಕ್ ಗೆ ಹೋದಾಗ ನೀವು ಈ ಸೌಲಭ್ಯಕ್ಕೆ ಎಲಿಜಿಬಲ್‌ ಅಲ್ಲ . ನೀವು ಈ ಹಿಂದೆ ಅರವತ್ತು ಸಾವಿರ ಲೋನ್ ಗೆ ಜಾಮೀನು ಹಾಕಿದ್ದು, ಅದು ವನ್ ಟೈಮ್ ಸೆಟ್ಲ್ ಮೆಂಟ್ ಆಗಿರುವುದರಿಂದ ನಿಮ್ಮ ‘ಸಿಬಿಲ್‌’ ಸ್ಕೋರ್ ಡೌನ್ ಆಗಿದೆ. ನಿಮಗೆ ಬ್ಯಾಂಕ್ ನಿಂದ ಕೇಳಿರುವ ಸೌಲಭ್ಯ ಸಿಗುವುದಿಲ್ಲ ಎಂದು ಉತ್ತರಿಸಿದರೆನ್ನಲಾಗಿದೆ.

ಹಾಗಾದರೆ ವನ್ ಟೈಮ್ ಸೆಟ್ಲ್ ಮೆಂಟ್ ಮಾಡುವಾಗ ಜಾಮೀನುದಾರನಾಗಿರುವ ನನ್ನನ್ನು ಏಕೆ ನೀವು ಕರೆಯಲಿಲ್ಲ ಎಂದು ಜಾನಿ ಪ್ರಶ್ನಿಸಿದ್ದು, ನಾನು ಮಾಡದ ತಪ್ಪಿಗೆ ಸಿಬಿಲ್ ಡೌನ್ ಆಗಿದೆ. ಇದಕ್ಕೆ ಕಾರಣ ಬ್ಯಾಂಕ್ ಸಿಬ್ಬಂದಿಗಳು, ನೀವು ನನ್ನನ್ನು ವನ್ ಟೈಮ್ ಸೆಟ್ಲ್ ಮೆಂಟ್ ಗೆ ಕರೆದಿಲ್ಲ ಯಾಕೆ ಎಂದು ಲೆಟ‌ರ್ ಕೊಡಿ ಎಂದು ಕೇಳಿದ್ದರು. .ರಿಜಿಸ್ಟರ್ ಲೆಟರ್ ಮೂಲಕ ಕೂಡ ಮತ್ತೆ ಮನವಿ ಮಾಡಿದ್ದು, ಕಳೆದೊಂದು ತಿಂಗಳಿನಿಂದ ಲೆಟರ್ ಕೇಳಿದರೂ ಇದುವರೆಗೂ ಬ್ಯಾಂಕ್ ನಿಂದ ಉತ್ತರ ಸಿಕ್ಕಿಲ್ಲ ಎಂದು ಇಂದು ಜಾನಿಯವರು ಬ್ಯಾಂಕಿನೊಳಗೆ ಧರಣಿ ಕುಳಿತರು.

ಅಪರಾಹ್ನದವರೆಗೂ ಅವರು ಬ್ಯಾಂಕ್ ಒಳಗೆ ಏಕಾಂಗಿಯಾಗಿ ಧರಣಿ ಕುಳಿತಿದ್ದು, ಮೇಲೇಳಲಿಲ್ಕ. ಅಪರಾಹ್ನ ಬ್ಯಾಂಕ್ ಮೇನೇಜರ್ ಅವರು, ತಮ್ಮ ಕರ್ತವ್ಯಕ್ಕೆ ಜಾನಿಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿಗಳು ಕೆ.ಪಿ.ಜಾನಿ ಅವರ ಮನವೊಲಿಸಿ, ಧರಣಿ ಹಿಂಪಡೆದಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ‘ಸುದ್ದಿ’ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ತಾವು ಬ್ಯಾಂಕಿನ ನಿಯಮಾವಳಿಯ ಪ್ರಕಾರವೇ ಜಾನಿ ಅವರೊಂದಿಗೆ ನಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕೆ.ಪಿ. ಜಾನಿಯವರನ್ನು ಸಂಪರ್ಕಿಸಿದಾಗ ಮುಂದಿನ ಏಳು ದಿನದೊಳಗೆ ಈ ವಿಷಯವನ್ನು ಸರಿ ಮಾಡಿ ಕೊಡುವುದಾಗಿ ಬ್ಯಾಂಕ್ ವತಿಯಿಂದ ಬರವಣಿಗೆಯ ಮೂಲಕ ಪತ್ರ ಕೊಟ್ಟ ಕಾರಣ ನಾನು ಧರಣಿಯನ್ನು ಹಿಂಪಡೆದಿದ್ದು, ಬ್ಯಾಂಕ್ ವತಿಯಿಂದ ಕರ್ತವ್ಯಕ್ಕೆ ಅಡ್ಡಿ ಪಡಿಸದೆಯೇ ತಾನು ಅಡ್ಡಿ ಪಡಿಸಿದರೆಂದು ಸುಳ್ಳು ದೂರು ಕೊಟ್ಟಲ್ಲಿ ಬ್ಯಾಂಕ್ ಅಧಿಕಾರಿ ಮೇಲೆ ದೂರು ದಾಖಲಿಸುವ ಹಕ್ಕು ನಮಗೂ ಇದೆ. ಈ ವಿಷಯದಲ್ಲಿ ಹೆದರುವ ಪ್ರಶ್ನೆ ಇಲ್ಲ ಎಂದು ಕೆ.ಪ. ಜಾನಿಯವರು ಸುದ್ದಿಗೆ ತಿಳಿಸಿದ್ದಾರೆ.