ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ತ್ರೈಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆ

0

ಜನರ ಸಮಸ್ಯೆಗೆ ಮೊದಲು ಸ್ಪಂದಿಸಿ : ಸಂಸದ ಕ್ಯಾ. ಬೃಜೇಶ್ ಚೌಟ

ಡೆಂಗ್ಯೂ ನಿಯಂತ್ರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ : ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆ ಮತ್ತು ಅದರ ನಡವಳಿ ಪಾಲನಾ ವರದಿ ಮಂಡನೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ವಿಶೇಷವಾಗಿ ಇಂದಿನ ಕೆಡಿಪಿ ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಪ್ರಗತಿ ಪರಿಶೀಲನಾ ಸಭೆಯ ನಡವಳಿಗೆ ಪಾಲನ ವರದಿಯನ್ನು ಆಲಿಸಿ ಅಧಿಕಾರಿಗಳು ಪ್ರಥಮವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದರು. ಸಮಸ್ಯೆಗಳ ಸ್ಪಂದನೆಗೆ ಅಧಿಕಾರಿಗಳು ಯಾವ ರೀತಿ ತಯಾರಿ ನಡೆಸಬೇಕೆಂಬ ಬಗ್ಗೆ ಮಾಹಿತಿ ನೀಡಿ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಸುಳ್ಯಕ್ಕೆ ಬೇರೆ ಕಾರ್ಯಕ್ರಮಕ್ಕೆ ಬಂದ ಕಾರಣದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೇನೆ ಎಂದು ಹೇಳಿದರು. ಅಲ್ಲದೆ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗದರ್ಶನವನ್ನು ನೀಡಿದರು. ಡೆಂಗ್ಯೂ ವಿಷಯದ ಬಗ್ಗೆ ಚರ್ಚೆ ನಡೆದು ಇದನ್ನು ಕೇವಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಬಿಟ್ಟುಕೊಡದೆ ಎಲ್ಲಾ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಗ್ರಾಮ ಮಟ್ಟದಲ್ಲಿ ಜನಜಾಗೃತಿಗೊಳಿಸುವ ಮತ್ತು ಗ್ರಾಮ ಗ್ರಾಮಗಳಿಂದ ರೋಗಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಅವರು ಹೇಳಿದರು.


ಸಭೆಯ ಆರಂಭದಲ್ಲಿಯೇ ಶಾಸಕಿ ಭಾಗೀರಥಿ ಮುರುಳ್ಯರವರು ತಾಲೂಕಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಮಾತನಾಡಿ, ಎಲ್ಲಾ ಅಧಿಕಾರಿಗಳು ಈ ವಿಷಯದ ಕುರಿತು ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು. ಅಲ್ಲದೆ ಸಭೆಯಲ್ಲಿ ಸುಳ್ಯ ನಗರ ಪಂಚಾಯತಿ ಪ್ರದೇಶದಲ್ಲಿ ನದಿ ಪರಂಬೋಕು ಮತ್ತು ರಸ್ತೆ ಪರಂಬೋಕುವಿನಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಂದಾಯ ಇಲಾಖೆ ಮತ್ತು ಸುಳ್ಯ ನಗರ ಪಂಚಾಯತ್‌ನವರು ಜಂಟಿಯಾಗಿ ಸಮೀಕ್ಷೆ ನಡೆಸುವ ಕುರಿತು, ಪೈಚಾರು – ಸೋಣಂಗೇರಿ ರಸ್ತೆಯ ಅಭಿವೃದ್ಧಿಯಲ್ಲಿ ಚರಂಡಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ, ಕೊಲ್ಲಮೊಗ್ರ ಗ್ರಾಮ ಪಂಚಾಯತಿನಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತು, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ ಅರ್ಹರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವ ಕುರಿತು, ತಾಲೂಕಿನಲ್ಲಿ ಅಡಿಕೆ ಹಳದಿ ರೋಗ, ಸದ್ರಿ ರೋಗದ ಬಗ್ಗೆ ಪರಿಶೀಲನೆ ನಡೆಸಿದ ವಿಷಯಗಳ ಕುರಿತು, ರಸ್ತೆಯ ಇಕ್ಕೆಲಗಳಲ್ಲಿ ತುಂಬಿರುವ ಕಾಡು ಬಳ್ಳಿಗಳನ್ನು ತೆರವುಗೊಳಿಸುವ, ಸುಳ್ಯದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ, ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿ, ಸುಳ್ಯದ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿಯ ವಿಳಂಬದ ಬಗ್ಗೆ, ಅಜ್ಜಾವರ ಗ್ರಾಮ ಪಂಚಾಯತಿನಲ್ಲಿ ಪರಿಶಿಷ್ಟ ವರ್ಗದ ಕಾಲೋನಿಯಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವ ಬಗ್ಗೆ ಇತ್ಯಾದಿ ವಿಷಯಗಳ ವರದಿ ವಿವರಗಳು ನಡೆಯಿತು.


ಸಭೆಯ ಆರಂಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಡೆಂಗ್ಯೂ ರೋಗ ಹರಡುವ ಮತ್ತು ಅದನ್ನು ನಿಯಂತ್ರಿಸುವ ಬಗ್ಗೆ ಸಾಕ್ಷ ಚಿತ್ರ ಪ್ರದರ್ಶನ ನೀಡಿ ಮಾಹಿತಿಯನ್ನು ನೀಡಲಾಯಿತು.


ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉದಯಕುಮಾರ್ ಶೆಟ್ಟಿ
ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಿ ಇ ಓ ರಾಜಣ್ಣ ಸ್ವಾಗತಿಸಿ, ವಂದಿಸಿದರು.