ಕೊಡಗಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ

0

ಸೂದನ ಎಸ್. ಈರಪ್ಪರಿಂದ

ಅರೆಭಾಷೆ ಅಕಾಡೆಮಿ ಸದಸ್ಯತ್ವ ನಿರಾಕರಣೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಳೆದ ವಾರವಷ್ಟೇ ಸರಕಾರದಿಂದ ನೇಮಕವಾಗಿದ್ದ ಮಡಿಕೇರಿಯ ಸೂದನ ಎಸ್. ಈರಪ್ಪರವರು ಸದಸ್ಯತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅರೆಭಾಷೆ ಅಕಾಡೆಮಿಗೆ ಅಧ್ಯಕ್ಷರ ನೇಮಕದ ಸಂದರ್ಭ ಕೊಡಗಿನವರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕಾಗಿ ಅವರು ಸದಸ್ಯತ್ವ ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ತಲೆತಲಾಂತರದಿಂದ ಎಲ್ಲ ಭಾಷಿಕರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ ಅರೆಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುತ್ತಿರುವ ಅರೆಭಾಷಿಕರನ್ನು ಕಡೆಗಣಿಸಲಾಗಿದೆ. ಸುಮಾರು 25 ವರ್ಷಗಳ ನಂತರ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಆಯ್ಕೆಯಾಗಿದ್ದು, ಇದಕ್ಕೆ ಪ್ರತಿಯಾಗಿ ಅರೆಭಾಷಿಕ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲವಾಗಿ ಅರೆಭಾಷೆ ಅಕಾಡೆಮಿ ಅಧ್ಯಕ್ಷತೆಯನ್ನು ಈ ಬಾರಿ ಕೊಡಗು ಜಿಲ್ಲೆಗೆ ನೀಡಬೇಕಾಗಿತ್ತು. ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡದವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈ ಬಾರಿ ಮತ್ತೆ ಅದೇ ಜಿಲ್ಲೆಗೆ ಅಧ್ಯಕ್ಷತೆಯನ್ನು ಕೊಟ್ಟಿರುವುದರ ಔಚಿತ್ಯವೇನು ? ಕಳೆದ ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಅರೆಭಾಷಿಕ ನಾಯಕರು ಸರಕಾರದ ಈ ಮಲತಾಯಿ ಧೋರಣೆಯನ್ನು ಸಹಿಸಿಕೊಂಡಿರುವುದು ಆಶ್ಚರ್ಯ. ಅವರಿಗೆ ಸ್ವಾಭಿಮಾನವಿದ್ದರೆ ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು.

ವಿರಾಜಪೇಟೆ ಮತ್ತು ಮಡಿಕೇರಿ ಕ್ಷೇತ್ರಗಳ ಶಾಸಕರು ತಮ್ಮ ಜಿಲ್ಲೆಯ ಅರೆಭಾಷಿಕರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಲು ಆಸಕ್ತಿ ತೋರಿಸಬೇಕಾಗಿತ್ತು. ಹಿಂದಿನ ಅರೆಭಾಷೆ ಅಕಾಡೆಮಿ ಆಡಳಿತವು ರಚಿಸಿದ್ದ ಶಬ್ದಕೋಶದಲ್ಲಿ ದ.ಕ.ಜಿಲ್ಲೆಯ ಗ್ರಾಮಗಳ ಅರೆಭಾಷಿಕ ಮನೆತನಗಳ ಹೆಸರುಗಳನ್ನು ಹಾಕಿ, ಕೊಡಗಿನ ಗ್ರಾಮಗಳ ಮನೆತನಗಳ ಹೆಸರನ್ನು ಹಾಕದಿರುವ ತಾರತಮ್ಯ ನಡೆದಿದೆ. ಈಗ ನೇಮಕಾತಿಯಲ್ಲಿ ತಾರತಮ್ಯ ನಡೆದಿದೆ. ಆದ್ದರಿಂದ ನಾನು ಅಕಾಡೆಮಿ ಸದಸ್ಯತ್ವವನ್ನು ನಿರಾಕರಿಸುತ್ತಿದ್ದೇನೆ” ಎಂದು ಸೂದನ ಎಸ್.ಈರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. ” ನಾನು ಅಕಾಡೆಮಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಯಾಕೆಂದರೆ ನೇಮಕಾತಿ ಆದೇಶ ನನ್ನ ಕೈಸೇರಿಲ್ಲ” ಎಂದವರು ತಿಳಿಸಿದ್ದಾರೆ.