ಭೀಕರ ಅಪಘಾತದಲ್ಲಿ ಮರೆಯಾದದ್ದು ಪ್ರತಿಭಾವಂತ ವಿದ್ಯಾರ್ಥಿನಿ
ಉದ್ಯೋಗದ ನಿರೀಕ್ಷೆಯಲ್ಲಿದ್ದ ರಚನಾಗೆ ಎದುರಾದದ್ದು ಸಾವು
ನಾಳೆ ಬೆಳಿಗ್ಗೆ ರಚನಾ ಅಂತ್ಯ ಸಂಸ್ಕಾರ
ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಬಳಿ ಇಂದು ಸಂಜೆ ಸಂಭವಿಸಿದ ಬಸ್ ಮತ್ತು ಸ್ಕೂಟಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ರಚನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು.
ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಪುತ್ರಿಯಾಗಿರುವ ರಚನಾ ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಯಾಗಿರುವ ತಂಗಿ ಅನನ್ಯ ಅವರನ್ನು ಕರೆದೊಯ್ಯಲು ಸುಳ್ಯಕ್ಕೆ ಬಂದಿದ್ದರು. ಅನನ್ಯ ಸಂಜೆ ತರಗತಿ ಮುಗಿದ ಬಳಿಕ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಅಭ್ಯಾಸಕ್ಕೆಂದು ನಿಂತಿದ್ದಳು. ಆಕೆಯನ್ನು ಕರೆದೊಯ್ಯಲು ಹೋಗಿದ್ದ ರಚನಾ ತಂಗಿಯೊಂದಿಗೆ ವಾಪಾಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ರಚನಾ ಕೂಡಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಶೈಕ್ಷಣಿಕವಾಗಿ ಉನ್ನತ ಶ್ರೇಣಿ ಪಡೆದುಕೊಂಡಿದ್ದರು. ಕ್ರೀಡೆಯಲ್ಲೂ ಮುಂದಿದ್ದ ಈಕೆ ಯಕ್ಷಗಾನ ಕಲಾವಿದೆಯೂ ಆಗಿದ್ದರು.
ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದು ಉತೀರ್ಣರಾಗಿದ್ದ ರಚನಾ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು.
ಮೃತ ರಚನಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಕಾಡುತೋಟ ಮನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.