ಕೆ.ವಿ.ಜಿ ಪಾಲಿಟೆಕ್ನಿಕ್ ನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ
ಮೋನಪ್ಪ ಗೌಡ ಕಾಟೂರು ಡಿ. 31ರಂದು ನಿವೃತ್ತಿ ಹೊಂದಲಿದ್ದಾರೆ.
1964ರ ಡಿಸೆಂಬರ್ 24ರಂದು ಜಾಲ್ಸೂರು ಗ್ರಾಮದ ಕಾಟೂರು ಲಿಂಗಪ್ಪ ಗೌಡ ಮತ್ತು ಕಮಲ ದಂಪತಿಯ ಪುತ್ರರಾಗಿ ಜನಿಸಿದ ಮೋನಪ್ಪ ಗೌಡರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಟೂರಿನಲ್ಲಿ ಪೂರೈಸಿ ನಂತರ ಸುಳ್ಯ ಸ.ಪ.ಪೂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆಯುತ್ತಾರೆ. ಪಿಯುಸಿಯಲ್ಲಿರುವಾಗ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ NSS ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿರುತ್ತಾರೆ.
ನಂತರ ತಮ್ಮ ಬಿ.ಎ ಪದವಿಯನ್ನು ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಪಡೆದು 1989ರ ನವೆಂಬರ್ ನಲ್ಲಿ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಉದ್ಯೋಗವನ್ನು ಪಡೆದು 2009ರಲ್ಲಿ ವಿದ್ಯಾಸಂಸ್ಥೆ ಸರಕಾರದ ಅನುದಾನಕ್ಕೆ ಒಳಪಟ್ಟಾಗ ದ್ವಿತೀಯ ದರ್ಜೆಯ(SDA) ಸಹಾಯಕರಾಗಿ ನಿಯುಕ್ತಿಗೊಳ್ಳುತ್ತಾರೆ. ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಕಳೆದ ಕೆಲವು ವರುಷಗಳಿಂದ ರಾಷ್ಟ್ರೀಯ ಸೇವಾ ಯೋಜನೆ(NSS)ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ಶಿಬಿರ ಆಯೋಜಿಸಲ್ಪಟ್ಟ ಸ್ಥಳದಲ್ಲಿ ಒಂದು ತೆಂಗಿನ ಗಿಡ ಅಥವಾ ಫಲ ನೀಡುವ ಗಿಡವನ್ನು ನೆಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಕೃಷಿಕರಾಗಿಯೂ ಗುರುತಿಸಿಕೊಂಡಿರುವ ಇವರು ವಿವಿಧ ಬಗೆಯ ಬೆಳೆಗಳನ್ನು ಬೆಳೆದಿದ್ದಾರೆ. ಜೇನು ಕೃಷಿ, ಕೈ ತೋಟದಲ್ಲಿ ವಿವಿಧ ಬಗೆಯ ತರಕಾರಿ ಬೆಳೆಯುವುದು ಇವರ ಮತ್ತೊಂದು ಕಾಯಕ. 2018ರಿಂದೀಚೆಗೆ ಕೆವಿಜಿ ಪಾಲಿಟೆಕ್ನಿಕ್ ಆವರಣ ಮತ್ತು ಸುತ್ತಲಿನ ಪ್ರದೇಶವನ್ನು ತಿಂಗಳಿಗೊಂದು ಬಾರಿ ಸ್ವಚ್ಛಗೊಳಿಸುವ ಒಂದು ಮಹತ್ತರ ನಿರ್ಧಾರ ಮಾಡಿದ್ದು, ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಈ ಸ್ವಚ್ಛತಾ ಆಂದೋಲನದಲ್ಲಿ ಕೈಜೋಡಿಸುತ್ತಿದ್ದಾರೆ.
ಇವರ ಪತ್ನಿ ಶ್ರೀಮತಿ
ಹರಿಣಾಕ್ಷಿ ಕೆ ಗೃಹಿಣಿಯಾದರೆ, ಹಿರಿಯ ಪುತ್ರ ಮನ್ವಿತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿ
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಕಿರಿಯ ಪುತ್ರ ಸುಮಿತ್ ಪಿಯುಸಿ ವ್ಯಾಸಂಗದಲ್ಲಿ ಮಾಡುತ್ತಿದ್ದಾರೆ. ಸಹೋದರಿ ಲೀಲಾವತಿ ಸುಶ್ರೂಷಾಧಿಕಾರಿ(Staff Nurse) ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.