0

ಕಡಬ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಶೀಘ್ರ ಮೇಲ್ದರ್ಜೇಗೆ-ಸಚಿವ ಎಸ್.ಅಂಗಾರ

ಕಡಬ: ಇಲ್ಲಿನ ಸಮುದಾಯ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಸಚಿವರಿಗೆ ಮನವಿ ನೀಡಲಾಗಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮ ವಹಿಸಲಾಗುವುದು ಎಂದು ಬಂದರು, ಮೀನುಗಾರಿಕಾ ಹಾಗೂ ಒಳನಾಡು ಜಲಸಾರಿಗೆ ಸಚಿವರು, ಸುಳ್ಯ ಕ್ಷೇತ್ರದ ಶಾಸಕರು ಆಗಿರುವ ಎಸ್. ಅಂಗಾರ ಹೇಳಿದರು.

ಅವರು ಜ.೩೦ರಂದು ಕಡಬ ಸಮುದಾಯ ಆಸ್ಪತ್ರೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಇತರ ಮೂಲದಿಂದ ಕೊಡಮಾಡಿದ ಸುಮಾರು ೮೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಡಬ ತಾಲೂಕು ಆದ ಬಳಿಕ ಕಡಬ ಸಮುದಾಯ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಸಬೇಕಾಗಿದೆ, ಈ ನಿಟ್ಟಿನಲ್ಲಿ ಈಗಾಗಲೇ ಆರೋಗ್ಯ ಸಚಿವರಿಗೆ ಮನವಿಯನ್ನು ನೀಡಲಾಗಿದೆ, ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಬೇಕಾದರೆ ಕೆಲವೊಂದು ನಿಯಾಮವಳಿಗಳಿವೆ, ವೈದ್ಯರು ಮತ್ತು ಸಿಬ್ಬಂದಿಗಳ ನೇಮಕವೂ ಆಗಬೇಕಿದೆ ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕೋವಿಡ್ ಬಳಿಕ ಆಕ್ಸಿಜನ್ ಕೊರತೆಯನ್ನು ಸವಲಾಗಿ ಸ್ವೀಕರಿಸಿ ಅಗತ್ಯ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ೧೬ ಕಡೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗಿದೆ, ಎರಡು ಮೂರು ವರ್ಷದಲ್ಲಿ ಆರೋಗ್ಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಲಾಗಿದೆ, ಪ್ರಾರಂಭದಲ್ಲಿ ವ್ಯಾಕ್ಸಿನೇಶನ್‌ನ್ನು ಬೋಗಸ್ ಅಂತ ಕರೆಯಲಾಗಿದ್ದರೂ ಬಳಿಕ ಜನತೆಗೆ ಅರ್ಥ ಆಗಿ ಎಲ್ಲರೂ ವ್ಯಾಕ್ಸಿನೇಶನ್ ಪಡೆದಿದ್ದಾರೆ. ವ್ಯಾಕ್ಸಿನೇಶನ್ ಪಡೆಯಲು ಬಾಕಿ ಇದ್ದವರು ಕೂಡಲೇ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ|ಕಿಶೋರ್ ಕುಮಾರ್ ಎಂ. ಮಾತನಾಡಿ, ಈಗಾಗಲೇ ವ್ಯಾಕ್ಸಿನೇಶನ್ ಆಗಿರುವುದುದರಿಂದ ಕೋರೋನಾ ಪ್ರಭಾವವೂ ಕಡಿಮೆಯಾಗಿದೆ, ಸಾರ್ವಜನಿಕರು ಕೋರೋನಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದ ಅವರು ಕಡಬ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಸಲು ಪ್ರೊಪೋಸಲ್ ಕಳುಹಿಸಲಾಗಿದೆ, ಜಿಲ್ಲೆಯಲ್ಲಿ ೧೬ ಕಡೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ನಿರ್ಮಾಣವಾಗಲಿದ್ದು ಇದರಲ್ಲಿ ಕಡಬವು ೧೫ನೇ ಘಟಕವಾಗಿದೆ ಎಂದು ಹೇಳಿದರು. ಭಾರತೀಯ ಸ್ಟೇಟ್ ಬ್ಯಾಂಕ್‌ನ ಕಡಬ ಶಾಖೆಯ ವ್ಯವಸ್ಥಾಪಕ ಅಹ್ಮದ್ ಮಸೂರ್, ಕಡಬ ತಹಸೀಲ್ದಾರ್ ಬಿ.ಅನಂತ ಶಂಕರ್ ಅವರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಡಬ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪಕೀರ ಮೂಲ್ಯ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಈ ಘಟಕಕ್ಕೆ ೮೦ ಲಕ್ಷ ರೂ. ವೆಚ್ಚವಾಗಿದ್ದು ಸಚಿವರ ಅನುದಾನದಿಂದ ೪೮ ಲಕ್ಷ, ಕೆ.ಎಚ್.ಆರ್.ಡಿ.ಪಿಯಿಂದ ೧೧.೮೫ ಲಕ್ಷ, ಎಸ್.ಬಿ.ಐ.ಯಿಂದ ೧೯.೪೨ಲಕ್ಷ ಅನುದಾನವನ್ನು ಜೋಡಿಸಿಕೊಂಡು ಘಟಕ ಸ್ಥಾಪಿಸಲಾಗಿದೆ, ಈ ಉತ್ಪಾದನಾ ಘಟಕದಲ್ಲಿ ೮೧ ಲೀ. ಪ್ರತಿ ನಿಮಿಷಕ್ಕೆ ಆಮ್ಲಜನಕ ಉತ್ಪಾದನೆಯಾಗುತ್ತದೆ ಎಂದ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ವಂದನಾರ್ಪಣೆಗೈದರು. ಆಶಾ ಕಾರ್ಯಕರ್ತೆ ಆಶಾ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಎ.ಪಿ.ಎಂ.ಸಿ.ಸದಸ್ಯರಾದ ಪುಲಸ್ತ್ಯ ರೈ, ಮೇದಪ್ಪ ಗೌಡ ಡೆಪ್ಪುಣಿ ಸೇರಿದಂತೆ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ್ ಎನ್ ಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here