ನಾಳೆ ಜಟ್ಟಿಪಳ್ಳದಲ್ಲಿ ಬೃಹತ್ ಸ್ವಾತಂತ್ರ್ಯ ನಡಿಗೆ, ಹಿರಿಯ ಸಾಧಕರಿಗೆ ಗೌರವಾರ್ಪಣೆ

0

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸುಳ್ಯದ ಜಟ್ಟಿಪಳ್ಳದಲ್ಲಿ ಪ್ರತೀ ಮನೆಯವರನ್ನು ಸೇರಿಸಿಕೊಂಡು ಬೃಹತ್ ಸ್ವಾತಂತ್ರ್ಯ ನಡಿಗೆ ನಡೆಸಲು ನಿರ್ಧರಿಸಲಾಗಿದ್ದು, ಸ್ವಾತಂತ್ರ್ಯ ದಿನವಾದ ನಾಳೆ ಆ.15 ರಂದು ಬೆಳಿಗ್ಗೆ 7 ಗಂಟೆಯಿಂದ ನಡಿಗೆ ಆರಂಭವಾಗಲಿದೆ.
ಸುದ್ದಿ ಜನಹಿತ ವೇದಿಕೆಯ ನೇತೃತ್ವದಲ್ಲಿ ಜಟ್ಟಿಪಳ್ಳ ಪರಿಸರದ ಎಲ್ಲ ಸಂಘ ಸಂಸ್ಥೆಗಳ ಕೂಡುವಿಕೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯವಾಗಿ ಎಲ್ಲರೊಡನೆ ಬೆರೆತು ಊರಿನ ಬೆಳವಣಿಗೆಗೆ ಮಾರ್ಗದರ್ಶನ ಗೈಯುವ 18 ಮಂದಿ ಹಿರಿಯರನ್ನು ಗೌರವಿಸಲಾಗುವುದು.

ಸುದ್ದಿ ಜನಹಿತ ವೇದಿಕೆ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸ್ಥಳೀಯ ಸಂಘಸಂಸ್ಥೆಗಳ ಪ್ರಮುಖರ ಎರಡನೇ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು. ಶ್ರೀರಾಮ ಭಜನಾ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ, ಎನ್ನೆಂಸಿ ನಿವೃತ್ತ ಸುಪರಿಂಟೆಂಡೆಂಟ್ ರಾಮಚಂದ್ರ ಪೆಲತ್ತಡ್ಕ, ಕಪಿಲ ಯುವಕ ಮಂಡಲದ ಕಾರ್ಯದರ್ಶಿ ವಿಪಿನ್, ಮಾಜಿ ಅಧ್ಯಕ್ಷ ಚೇತನ್, ಗ್ರೀನ್ ಬಾಯ್ಸ್ ನ ರಶೀದ್ ಜಟ್ಟಿಪಳ್ಳ ಹಾಗೂ ಶಿಹಾಬ್, ಸಿಟಿ ಫ್ರೆಂಡ್ಸ್ ನ ರಜಾಕ್, ಹರ್ಷವರ್ಧನ್ ಮಡಪ್ಪಾಡಿ, ಮಹಿಳಾ ಮಂಡಲದ ಪರವಾಗಿ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಸುದ್ದಿ ಜನಹಿತ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಸಭೆಯಲ್ಲಿ ಭಾಗವಹಿಸಿದ್ದರು.
ಆ.15 ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ 7 ಗಂಟೆಗೆ ಜಟ್ಟಿಪಳ್ಳ ಪ್ರದೇಶದ ಎಲ್ಲ ಮನೆಗಳ ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ರಾಷ್ಟ್ರಧ್ವಜದೊಂದಿಗೆ ಅವರವರ ಮನೆಯ ಪಕ್ಕದ ರಸ್ತೆಗೆ ಬಂದು ನಡಿಗೆಯೊಂದಿಗೆ ಕೆಂಚಪ್ಪ ಭಂಡಾರಿಯವರ ಮನೆ ಎದುರು ಇರುವ ಸುಸ್ವಾಗತಂ ಫಲಕದ ಬಳಿಗೆ ಬರಬೇಕು. ಕಾನತ್ತಿಲ ರಸ್ತೆಯಿಂದ ಬರುವವರು, ಜಟ್ಟಿಪಳ್ಳ ಕಟ್ಟೆ ಕಡೆಯಿಂದ ಬರುವವರು ಮತ್ತು ಬೊಳಿಯಮಜಲು ಕಡೆಯಿಂದ ಬರುವವರು ಎಲ್ಲರೂ ಸುಸ್ವಾಗತಂ ಫಲಕದ ಬಳಿ ಸೇರಿದ ನಂತರ ಅಲ್ಲಿಂದ ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾ ಮಾಧವ ಕುದ್ಪಾಜೆಯವರ ಅಂಗಡಿ, ಎಸ್.ವಿ.ಎಂ.ಆಸ್ಪತ್ರೆಯ ವರೆಗೆ ಬಂದು ಹಿಂತಿರುಗಿ ಬಂದು ಜಟ್ಟಿಪಳ್ಳ ಕಟ್ಟೆ ಎದುರು ಸೇರುವುದು. ಅಲ್ಲಿ ಗಾಯಕ ಕೆ.ಆರ್.ಗೋಪಾಲಕೃಷ್ಣರ ನೇತೃತ್ವದಲ್ಲಿ ದೇಶಭಕ್ತಿ ಗೀತೆ ಗಾಯನ ನೆರವೇರುವುದು. ಬಳಿಕ 18ಮಂದಿಗೆ ಗೌರವಾರ್ಪಣೆ, ರಾಷ್ಟ್ರಗೀತೆ, ಸಿಹಿ ವಿತರಣೆ ನಡೆಯುವುದು.

ಸ್ಥಳೀಯರಾದ ಡಾ|ಶಂಕರ ಭಟ್, ಶ್ರೀಮತಿ ರತ್ನಾವತಿ ಅಣ್ಣುನಾಯ್ಕ್, ಎ.ಕೆ.ಅಜಿಲ, ಡಾ.|ಎಸ್.ರಂಗಯ್ಯ, ಹರೀಶ್ ಎಂ.ಆರ್., ಜಟ್ಟಿಪಳ್ಳ ನರಸಿಂಗ ರೈ, ಕೆಂಚಪ್ಪ ಭಂಡಾರಿ, ಕೆ. ಆರ್. ಗೋಪಾಲಕೃಷ್ಣ, ಕೆ. ಅಬೂಬಕ್ಕರ್ ಮೇಸ್ತ್ರಿ, ಬಿ.ಆರ್.ರೋಹಿತ, ಡಾ|ಕೇಶವ ಜಟ್ಟಿಪಳ್ಳ, ಶ್ರೀಮತಿ ತಾರಾವತಿ ಕೆ.ಎಲ್., ಶ್ರೀಮತಿ ಬೀಪಾತುಮ್ಮ, ಶ್ರೀಮತಿ ಪಾಚು, ಐ.ಎಚ್.ವಿಜಯ ಮೇಸ್ತ್ರಿ, ಕೆ.ಕೆ.ಕೃಷ್ಣಪ್ಪ ಗೌಡ, ಟಿ.ನಾರಾಯಣ ಭಟ್, ರಾಜಾರಾಮ ನಾಯಕ್ ರನ್ನು ಸನ್ಮಾನಿಸಲು ನಿರ್ಧರಿಸಲಾಗಿದ್ದು, ನಗರ ಪಂಚಾಯತ್ ಉಪಾಧ್ಯಕ್ಷರಾದ ಸ್ಥಳೀಯ ಜನಪ್ರತಿನಿಧಿ ಶ್ರೀಮತಿ ಸರೋಜಿನಿ ಪೆಲತಡ್ಕ, ಸನ್ಮಾನ ನೆರವೇರಿಸುವರು.
ಜಟ್ಟಿಪಳ್ಳ ಪರಿಸರದ ಎಲ್ಲ ನಾಗರಿಕರೂ ಈ ಅಮೃತ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.