ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೊ.ಕೋಡಿ ಕುಶಾಲಪ್ಪ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಇತ್ತೀಚಿಗೆ ಅಗಲಿದ ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿ, ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡರಿಗೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಸಂಜೆ ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.
ಎನ್ನೆಂಸಿಯ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಬಾಲಚಂದ್ರ ಗೌಡರು ಪ್ರೊ. ಕೋಡಿಯವರ ಭಾವಚಿತ್ರದ ಮುಂದೆ ದೀಪ ಬೆಳಗಿ,ಪುಷ್ಪಾರ್ಚಣೆ ಮಾಡಿದರು.
ಬಳಿಕ ಎನ್ನೆಂಸಿಯ ಉಪನ್ಯಾಸಕರಾದ ಸಂಜೀವ ಕುದ್ಪಾಜೆಯವರು ಮಾತನಾಡಿ ಭಾಷಾ ವಿಜ್ಞಾನಿಯಾದ ಅವರ ಸಾಹಿತ್ಯ ಕೃಷಿಗೆ ಉನ್ನತ ಸ್ಥಾನಮಾನ ಸಿಗಬೇಕಿತ್ತು.ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಅರ್ಹರಾಗಿದ್ದರು. ನಮ್ಮ ನಡುವೆ ಇರುವ ಒಳ್ಳೆಯ ಹೃದಯಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಸಾಹಿತಿ ಶ್ರೀಮತಿ ಲೀಲಾ ದಾಮೋದರ್ ಮಾತನಾಡಿ ಅಪಾರವಾದ ಜ್ಞಾನವನ್ನು ಹೊಂದಿದ ಸೌಜನ್ಯದ ಸಾಕಾರಮೂರ್ತಿಯಾಗಿದ್ದರು ಎಂದು ಹೇಳಿದರು. ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ ಅವರನ್ನು ನಾವು ಯಾವಾಗಲು ಸ್ಮರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಚಂದ್ರ ಗೌಡ ನುಡಿದರು. ಸಾಮಾಜಿಕ ಧುರೀಣ ಎಂ.ಬಿ.ಸದಾಶಿವರು ಮಾತನಾಡಿ ಕೋಡಿಯವರು ಅನೇಕ ಸಾಹಿತಿ,ಲೇಖಕರನ್ನು ಸೃಷ್ಟಿ ಮಾಡಿದ ಮಹಾನ್ ಮೇದಾವಿ. ವಿಶ್ವ ವಿದ್ಯಾನಿಲಯದ ಉಪಕುಲಪತಿ ಹುದ್ದೆಗೆ ಯೋಗ್ಯವಾದ ವ್ಯಕ್ತಿ ಯಾಗಿದ್ದರು.ಕ.ಸಾ.ಪ ವತಿಯಿಂದ ಅವರ ಹೆಸರಿನಲ್ಲಿ ವರ್ಷಕ್ಕೊಂದು ಶಾಶ್ವತ ಕಾರ್ಯಕ್ರಮ ಮಾಡಬೇಕೆಂದು ಹೇಳಿದರು. ಕ.ಸಾ.ಪ.ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ,ಪ್ರೊ.ಕೋಡಿಯವರಿಗೆ ನುಡಿ ನಮನ ಸಲ್ಲಿಸಿದರು.ಕ.ಸಾ‌.ಪ
ಕಾರ್ಯದರ್ಶಿ ತೇಜಸ್ವಿ ಕಡಪಳ ವಂದಿಸಿದರು. ಆರಂಭದಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಪಾಲ್ ಸ್ಟುಡಿಯೋ, ಪತ್ರಕರ್ತ ಗಂಗಾಧರ ಮಟ್ಟಿ,ಕ.ಸ.ಪಾ.ಜಿಲ್ಲಾ ಸಮಿತಿ ಸದಸ್ಯ ರಾಮಚಂದ್ರ ಪಲ್ಲತಡ್ಕ, ಕ.ಸಾ.ಪ.ತಾಲೂಕು ಘಟಕದ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ, ಕೋಶಾಧಿಕಾರಿ ದಯಾನಂದ ಆಳ್ವ, ಕ.ಸ.ಪಾ.ನಿರ್ದೇಶಕರುಗಳಾದ ಕೇಶವ ಸಿ.ಎ.,ಜಯರಾಮ ಶೆಟ್ಟಿ, ರಮೇಶ್ ನೀರಬಿದಿರೆ, ಲತಾ ಸುಪ್ರೀತ್ ಮೋಂಟಡ್ಕ,ಪತ್ರಕರ್ತ ತೇಜೇಶ್ವರ ಕುಂದಲ್ಪಾಡಿ ಉಪಸ್ಥಿತರಿದ್ದರು.