ಕಲ್ಲಪಳ್ಳಿ ಗಡಿಭಾಗದ ರಸ್ತೆಯ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯರಿಂದ ಮಣ್ಣು ಹಾಕಿ ರಸ್ತೆ ಬಂದ್

0

ಬಡ್ಡಡ್ಕ ಮಾರ್ಗವಾಗಿ ಕೇರಳದ ಪಾಣತ್ತೂರು ಕಡೆಗೆ ಸಂಚರಿಸುವ ಕಲ್ಲಪಳ್ಳಿ ಗಡಿಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ರಸ್ತೆಯನ್ನು ಸಚಿವ ಎಸ್‌.ಅಂಗಾರ ರವರ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದೆ. ಕನಿಷ್ಠ 20 ದಿನಗಳ ಕಾಲ ಕ್ಯೂರಿಂಗ್ ಆಗಬೇಕಾಗಿದ್ದು ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಲ್ಲಲ್ಲಿ ಮಾಹಿತಿಗಾಗಿ ಬ್ಯಾನರ್ ಹಾಗೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಕೆಲ ವಾಹನ ಸವಾರರು ಅಲ್ಲಿ ಅಳವಡಿಸಿದ ಬ್ಯಾರಿ ಕೇಡ್ ಗಳನ್ನು ತೆರವು ಮಾಡಿ ಕೇವಲ ಎರಡು ದಿನ ಕಳೆಯುವಷ್ಟರಲ್ಲಿ ಕಾಂಕ್ರೀಟ್ ರಸ್ತೆಯ ಮೂಲಕ ಸಂಚರಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಲ್ಲಿನ ಸ್ಥಳೀಯರು ಸೇರಿ ರಸ್ತೆಯ ಮೇಲೆ ಅಡ್ಡಲಾಗಿ ಮಣ್ಣು ಹಾಕಿ ವಾಹನ ಸಂಚಾರವನ್ನು ತಡೆಗಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅದಲ್ಲದೇ ಕೇರಳ ಪೋಲಿಸರು ಕಳೆದ ರಾತ್ರಿ ಸಮಯದಲ್ಲಿ ಕಾಂಕ್ರೀಟ್ ರಸ್ತೆಯ ಮೇಲೆ ಕೆ.ಎಲ್.ನೋಂದಣಿಯ ಇನೋವಾ ಕಾರಿನಲ್ಲಿ ಪಾಣತ್ತೂರು ಕಡೆಗೆ ಸಂಚರಿಸಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಕಾನೂನು ಪಾಲಿಸಬೇಕಾದ ಪೋಲಿಸರು ಹೀಗೆ ಮಾಡುವುದು ಸರಿಯೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.