ಕನ್ನಡ ಉಳಿಸುವುದೆಂದರೆ ಭಾಷೆಯನ್ನು ಉಳಿಸುವುದು ಮಾತ್ರವಲ್ಲ; ಕನ್ನಡ ನಾಡಿನ ಬಹಶ್ರುತ ಸಾರ್ವಭೌಮತ್ಯವನ್ನು ಉಳಿಸುವುದು, ಸುಳ್ಯ ತಾಲೂಕು ೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಆರ್. ಗಂಗಾಧರ್ ಅಭಿಮತ, ಕೃಷಿಕರ ಸಮಸ್ಯೆ ನಾಡಿನ ಬದುಕಿನ ಪ್ರಶ್ನೆ; ಸರಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕು ಎಂದ ಸಮ್ಮೇಳನಾಧ್ಯಕ್ಷರು

0

ಬಹುಶ್ರುತ
ಸಾರ್ವಭೌಮತ್ವ

ಕನ್ನಡವನ್ನು ಉಳಿಸುವುದೆಂದರೆ, ಕೇವಲ ಭಾಷೆಯನ್ನು ಮಾತ್ರ ಉಳಿಸುವುದಲ್ಲ. ಕನ್ನಡ ಸಂಸ್ಕೃತಿ, ಕನ್ನಡ ಪರಂಪರೆ, ಇತಿಹಾಸ, ವೈವಿದ್ಯಮಯ ಜೀವನ, ನಾಡು, ನುಡಿ, ಗಾಳಿ, ಜಲ ಹೀಗೆ ಕನ್ನಡನಾಡಿನ ಬಹುಶ್ರುತ ಸಾರ್ವಭೌಮತ್ವವನ್ನು ಉಳಿಸುವುದಾಗಿದೆ. ನಮ್ಮ ಭಾಷೆ ಮಾತ್ರವಲ್ಲ ಆಚಾರ, ವಿಚಾರ, ನಡೆನುಡಿಗಳಲ್ಲಿ ಕನ್ನಡವು ಪ್ರತಿಧ್ವನಿಸಬೇಕು. ಶ್ರದ್ಧಾಭಕ್ತಿಯಿಂದ ಕನ್ನಡವನ್ನು ಪ್ರೀತಿಸಬೇಕು ಎಂದು ವಿಶ್ರಾಂತ ಪ್ರಾಂಶುಪಾಲ, ಲೇಖಕ ಕೆ.ಆರ್. ಗಂಗಾಧರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಗೂನಡ್ಕದಲ್ಲಿ ನಡೆದ ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠದಿಂದ ಮಾತನಾಡಿದರು.

“_ಕೇವಲ ಸರಕಾರದ ಕಾನೂನುಗಳ ಜಾರಿಯಿಂದ ಕನ್ನಡೀಕರಣ ಸಾಧ್ಯವಾಗುವುದಿಲ್ಲ. ಕನ್ನಡನಾಡಿನಲ್ಲಿ ವಾಸಿಸುವ ಪ್ರತಿ ವ್ಯಕ್ತಿಯು ಕನ್ನಡವನ್ನು ಕಲಿತು ವ್ಯವಹರಿಸುವ ಜ್ಞಾನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯ ಪ್ರತಿ ಹಂತದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡಬೇಕು. ಬೇರೆ ಭಾಷೆಯಿಂದ ನಾವು ಪ್ರಭಾವಿತರಾಗುವ ಬದಲು ಕನ್ನಡವು ಇತರ ಭಾಷಿಗರ ಮೇಲೆ ಪ್ರಭಾವ ಬೀರುವಂತೆ ಮಾಡಬೇಕು. ನಮ್ಮಲ್ಲಿರುವ ಧರ್ಮ, ಜಾತಿ, ಮತ, ಪಂಥ, ಮಾತೃಭಾಷೆಗಳ ವೈರುಧ್ಯ ವೈಷಮ್ಯವನ್ನು ತೊಡೆದು ಹಾಕಿ ನಾವೆಲ್ಲ ಒಂದಾಗಿ ನಮ್ಮ ನಾಡು ನುಡಿಯಾದ ಕನ್ನಡಕ್ಕಾಗಿ ಅದರ ಒಳಿತಿಗಾಗಿ ನಾವು ಯಾವುದೇ ತ್ಯಾಗಕ್ಕೆ ಸಿದ್ಧರಾಗಬೇಕು ” ಎಂದು ಕೆ.ಆರ್.ಜಿ. ಹೇಳಿದರು.

” ತಾವು ಜನಸಾಮಾನ್ಯರಿಗಿಂತ ಒಂದಷ್ಟು ಭಿನ್ನ, ಒಂದಷ್ಟು ಮೇಲಂತಸ್ತಿನವರು ಎಂದು ಭ್ರಮಿಸಿಕೊಂಡು ಕೆಲವು ಸಾಹಿತಿಗಳು ಜನಸಾಮಾನ್ಯರೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ. ತಾವು ಸಕ್ರಿಯರಾಗಿರುವ ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಅಥವಾ ತಮಗೆ ವಿಶೇಷ ಸ್ಥಾನಮಾನ ದೊರಕುವ ಸಭೆಗಳಲ್ಲಿ ಅವರು ಪಾಲುಗೊಳ್ಳುತ್ತಾರೆಯೆ ಹೊರತು ಇತರ ಸಾಹಿತ್ಯ ಸಮಾರಂಭಗಳಲ್ಲಿ ಇವರು ಭಾಗವಹಿಸುವುದಿಲ್ಲ. ಈ ರೀತಿಯ ಮನೋಭಾವನೆ ಸಾಹಿತ್ಯ ಚಟುವಟಿಕೆಗಳಿಗೆ ಮುಳುವಾಗುತ್ತದೆ ” ಸಮ್ಮೇಳನಾಧ್ಯಕ್ಷರು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದರು.

ಸುಳ್ಯದ ಪ್ರಧಾನ ಬೆಳೆಯಾದ ಅಡಿಕೆಗೆ ಹಳದಿರೋಗ ಮತ್ತು ಎಲೆ ಚುಕ್ಕಿ ರೋಗ ತೀವ್ರವಾಗಿ ಬಾಧಿಸುತ್ತಾ ಇಲ್ಲಿನ ಕೃಷಿಕರ ಬದುಕನ್ನು ಕಂಗಾಲಾಗಿಸಿದೆ. ಇದು ನಮ್ಮ ನಾಡಿನ ಬದುಕಿನ ಪ್ರಶ್ನೆ, ಸರಕಾರ, ಇಲಾಖೆ ಮತ್ತು ವಿಜ್ಞಾನಿಗಳು ಪ್ರಬಲವಾದ ಇಚ್ಚಾಶಕ್ತಿಯಿಂದ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲೇ ಬೇಕಾಗಿದೆ . ಇಲ್ಲದಿದ್ದರೆ ಕನ್ನಡ ಮತ್ತು ಸಾಹಿತ್ಯದ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ” ಎಂದ ಕೆ.ಆರ್. ಗಂಗಾಧರ್ ಅವರು,
ಪ್ರಾಕೃತಿಕ ವಿಕೋಪಗಳು ಕೂಡಾ ಇತ್ತೀಚಿನ ೨-೩ ವರ್ಷಗಳಿಂದ ಸುಳ್ಯ ತಾಲೂಕನ್ನು ಬಾಧಿಸುತ್ತಿದೆ. ಈ ಬಗ್ಗೆಯೂ ಸರಕಾರ ಗಮನಿಸಬೇಕಾಗುತ್ತದೆ. ’ಬದುಕು ಇದ್ದರೆ ಮಾತ್ರ ಸಾಹಿತ್ಯ’ ಬದುಕಿಗೆ ಸಂಚಕಾರ ಬಂದಾಗ ಸಾಹಿತ್ಯಕ್ಕೂ ಸಂಚಕಾರ ಬರಬಹುದು ಎಂದರು.