ಡಿ. 16-20: ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ, ಗೊನೆಮುಹೂರ್ತ

0

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಡಿ. 16ರಿಂದ ಡಿ. 20ರ ತನಕ ಜರಗಲಿದ್ದು, ಗೊನೆಮುಹೂರ್ತ, ಬೆತ್ತ ಮುಹೂರ್ತ, ರಥ ಮುಹೂರ್ತ ಮತ್ತು ಚಪ್ಪರ ಮುಹೂರ್ತ ಡಿ.
ಡಿ. 12ರಂದು ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರೂ, ಪ್ರಧಾನ ಅರ್ಚಕರೂ ಆಗಿರುವ ಎಂ.ವಿ. ಶ್ರೀವತ್ಸ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಗುಣಸಾಗರ ಕಟ್ಟ ಚಪ್ಪರ ಮುಹೂರ್ತ ನೆರವೇರಿಸಿದರು. ಧಾರ್ಮಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ, ಅಧ್ಯಕ್ಷ ಅರ್ಗುಡಿ ಸದಾನಂದ ರೈ, ಸಂಘಟನಾ ಕಾರ್ಯದರ್ಶಿಗಳಾದ ಅರ್ಗುಡಿ ವಿಶ್ವನಾಥ ರೈ, ಮಹೇಶ್ ಸೂಂತಾರು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಬೈಲುವಾರು ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿ. 15ರಂದು ಬೆಳಿಗ್ಗೆ ಹಸಿರುವಾಣಿ ಸಂಗ್ರಹ ಪ್ರಾರಂಭಗೊಂಡು ಸಂಜೆ ಉಗ್ರಾಣ ಮುಹೂರ್ತ ನಡೆಯಲಿದೆ. ಡಿ. 16ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ಬಳಿಕ ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಬೆಳಿಗ್ಗೆ ದ.ಕ. ಜಿಲ್ಲೆಯ ಶೃಂಗೇರಿ ಗುರುದೇವತಾ ಭಜನಾ ಮಂಡಳಿಗಳ ವತಿಯಿಂದ ಭಜನಾ‌ ಕಾರ್ಯಕ್ರಮ, ಮಧ್ಯಾಹ್ನ ದೇವರ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ ದೈವಗಳಿಗೆ ಪರ್ವ, ಮಹಾ ರಂಗಪೂಜೆ, ಉತ್ಸವ ಬಲಿ, ಪಲ್ಲಕಿ ಉತ್ಸವ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಡಿ. 17ರಂದು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸಂಜೆ ದೇವತಾ ಪ್ರಾರ್ಥನೆ ವಿವಿಧ ವೈದಿಕ ಕಾರ್ಯಗಳು, ಡಿ. 18ರಂದು ಧ್ವಜಾರೋಹಣ, ವಿವಿಧ ವೈದಿಕ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಮಹಾರಂಗಪೂಜೆ, ಉತ್ಸವ ಬಲಿ, ಬ್ರಹ್ಮ ರಥಾಧಿವಾಸ ನಡೆಯಲಿದೆ. ಡಿ. 19 ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಪೂರ್ವಾಹ್ನ ಬಲಿ ಹೊರಟು ಬ್ರಹ್ಮರಥಾರೋಹಣ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 9.30ರಿಂದ ಬ್ರಹ್ಮ ರಥೋತ್ಸವ ಸಿಡಿಮದ್ದು ಪ್ರದರ್ಶನ ಬಳ್ಪ ಬೆಡಿ, ಉತ್ಸವ ಬಲಿ, ಶಯನೋತ್ಸವ ನಡೆಯಲಿದೆ. ಡಿ. 20 ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ತುಲಾಭಾರ ಸೇವೆ, ಕನ್ನಿಕಾ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ ಕುಮಾರಾಧಾರಾ ನದಿಗೆ ಶ್ರೀ ದೇವರ ಅವಭೃತಯಾತ್ರಾರಂಭ, ಕಟ್ಟೆಪೂಜೆ, ಅವಭೃತೋತ್ಸವ ನಡೆಯಲಿದೆ. ಡಿ. 19ರಂದು ತರಬೇತಿ ಪಡೆದ ಭಜನಾರ್ಥಿಗಳಿಂದ ಸಂಜೆ 6.00ರಿಂದ ನೃತ್ಯ ಭಜನಾ ಸಂಕೀರ್ತನೆ ನಡೆಯಲಿದ್ದು, ಮಿನಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಉದ್ಘಾಟಿಸಲಿದ್ದಾರೆ.