ತಾರಕಕ್ಕೇರಿದ ಡಾ| ಕೆ.ವಿ. ಚಿದಾನಂದ್ – ಡಾ| ರೇಣುಕಾಪ್ರಸಾದ್ ಕೆ.ವಿ. ಭಿನ್ನಾಭಿಪ್ರಾಯ, ರೇಣುಕಾಪ್ರಸಾದರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದಿರುವ ಬೆನ್ನಲ್ಲೇ ಡಾ| ಜ್ಯೋತಿ ಆರ್ ಪ್ರಸಾದ್, ಡಾ| ಅಭಿಜ್ಞಾ ಪ್ರಸಾದ್‌ರಿಗೂ ಕೊಕ್, ದ.23ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಉಗ್ರ ಹೋರಾಟ ಮಾಡಲು ಡಾ| ಆರ್.ಪಿ. ಮತ್ತು ತಂಡ ನಿರ್ಧಾರ

0

ಸುಳ್ಯದ ಅಮರ ಶಿಲ್ಪಿ ಡಾ| ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ| ರೇಣುಕಾಪ್ರಸಾದ್ ಕೆ.ವಿ. ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.
ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಡಾ| ರೇಣುಕಾಪ್ರಸಾದರನ್ನು ಬದಲಾಯಿಸಿ ಸದಸ್ಯರನ್ನಾಗಿ ಮಾತ್ರ ಮುಂದುವರಿಸಿದ ಡಾ| ಕೆ.ವಿ. ಚಿದಾನಂದರ ನೇತೃತ್ವದ ಆಡಳಿತ ಮಂಡಳಿ ಇದೀಗ ಡಾ| ರೇಣುಕಾಪ್ರಸಾದರವರ ಪತ್ನಿ ಡಾ| ಜ್ಯೋತಿ ಆರ್. ಪ್ರಸಾದ್ ಹಾಗೂ ಪುತ್ರಿ ಡಾ| ಅಭಿಜ್ಞಾ ಆರ್ ಪ್ರಸಾದರನ್ನು ಆಡಳಿತ ಮಂಡಳಿ ಸದಸ್ಯತ್ವದಿಂದ ತೆಗೆದು ಜಗದೀಶ ಅಡ್ತಲೆ ಮತ್ತು ಮೀನಾಕ್ಷಿ ಹೇಮನಾಥರನ್ನು ಸದಸ್ಯರನ್ನಾಗಿ ನೇಮಿಸಿರುವುದರಿಂದ ಡಾ| ರೇಣುಕಾಪ್ರಸಾದ್ ಮತ್ತು ಅವರು ನಡೆಸುತ್ತಿರುವ ಸಂಸ್ಥೆಗಳ ಸಿಬ್ಬಂದಿ ವರ್ಗ ಸಿಡಿದೆದ್ದಿದ್ದು ಡಿ. 23ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ನ್ಯಾಯ ಸಿಗುವವರೆಗೆ ಉಗ್ರ ಹೋರಾಟ ನಡೆಸಲು ನಿರ್ಧರಿಸಿದೆ.

ಇಂದು ಕೆ.ವಿ.ಜಿ. ಡೆಂಟಲ್ ಕಾಲೇಜಿನ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಡಾ| ರೇಣುಕಾಪ್ರಸಾದ್ ಕೆ.ವಿ. ಮತ್ತು ಸಂಸ್ಥೆಗಳ ಪ್ರಾಂಶುಪಾಲರುಗಳು ಈ ವಿಷಯ ಪ್ರಕಟಿಸಿದರು.

ಕುರುಂಜಿಯವರು 2012ರಲ್ಲಿ ತೀರಿಕೊಳ್ಳುವ ಮೊದಲು 2009ರಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಕೆಲವು ವಿದ್ಯಾಸಂಸ್ಥೆಗಳನ್ನು ಅಣ್ಣ ನೋಡಿಕೊಳ್ಳುವಂತೆ ಮತ್ತು ಕೆಲವು ವಿದ್ಯಾಸಂಸ್ಥೆಗಳನ್ನು ಪ್ರಧಾನ ಕಾರ್ಯದರ್ಶಿಯಾದ ನಾನು ನೋಡಿಕೊಳ್ಳುವಂತೆ ವ್ಯವಸ್ಥೆ ರೂಪಿಸಿದ್ದರು. ಕೊರೊನಾ ಸಂದರ್ಭದಲ್ಲಿ ಹಣಕಾಸಿನ ವ್ಯವಸ್ಥೆ ಹದಗೆಟ್ಟು ನನ್ನ ನೇತೃತ್ವದ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳಿಗೆ ಸಂಬಳ ನೀಡಲು ತೊಂದರೆಯಾದಾಗ ನಾನು ಅಕಾಡೆಮಿ ಅಧ್ಯಕ್ಷರಾದ ನನ್ನ ಅಣ್ಣ ಕೆ.ವಿ. ಚಿದಾನಂದರ ಬಳಿಗೆ ಹೋಗಿ ಮೂರು ತಿಂಗಳ ಸಂಬಳಕ್ಕೆ ಹಣ ನೀಡುವಂತೆ ಕೇಳಿಕೊಂಡಿದ್ದೆ. ಅದು ಅವನು ನಡೆಸುವ ವಿದ್ಯಾಸಂಸ್ಥೆಗಳ ಹಣವನ್ನು ಕೇಳಿದ್ದಲ್ಲ. ತಂದೆಯವರು ಆಪತ್ಕಾಲಕ್ಕೆ ಎಂದು ಅಕಾಡೆಮಿಯ ಹೆಸರಲ್ಲಿ ಇರಿಸಿರುವ ರೂ.50 ಕೋಟಿಯ ರಿಸರ್ವ್ ಹಣದಿಂದ ಕೇಳಿದ್ದು. ಮುಂದೆ ವಿದ್ಯಾರ್ಥಿಗಳಿಂದ ಫೀಸ್ ಸಂಗ್ರಹ ವಾದ ಬಳಿಕ ಆ ಹಣವನ್ನು ಮರು ಜಮೆ ಮಾಡುವುದಾಗಿಯೂ ಹೇಳಿದ್ದೆ. ಆದರೆ ಅವನು ಅದನ್ನು ನಿರಾಕರಿಸಿ ನಿನ್ನದು ನಿನಗೆ – ನನ್ನದು ನನಗೆ ಅಂದ. ಈಗ ನನ್ನ ಮೆಂಬರ್ ಶಿಫ್ ನ್ನೇ ತೆಗೆಯಲು ಮುಂದಾಗಿದ್ದಾನೆ. ಅಕಾಡೆಮಿಯ ಅಧ್ಯಕ್ಷ ಡಾ| ಚಿದಾನಂದ್, ಕೆ.ವಿ. ಹೇಮನಾಥ್, ಜಗದೀಶ ಅಡ್ತಲೆ, ಮತ್ತು ಅಕ್ಷಯ್ ಕೆ.ಸಿ. ಸೇರಿಕೊಂಡು ಆ 50 ಕೋಟಿಯನ್ನು ಅವರ ಸುಪರ್ದಿಗೆ ತೆಗೆದುಕೊಳ್ಳಲು ಈ ಪ್ರಯತ್ನ ನಡೆಸಿದ್ದಾರೆ. ಅವರ ನಿರ್ಣಯದ ವಿರುದ್ಧ ನಾನು ಕೋರ್ಟಿಗೆ ಹೋಗಿದ್ದೇನೆ. ಎರಡು ಕಡೆ ನನಗೆ ಜಯ ಸಿಕ್ಕಿದೆ. ಆದರೆ ಈಗ ಹೈ ಕೋರ್ಟ್‌ನಿಂದ ಅವರ ಪರವಾಗಿ ಇಂಟರಿಂಗ್ ಆರ್ಡರ್ ಆಗಿದೆ. ಅದರ ವಿರುದ್ಧ ನಾನು ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಅಡ್ಮಿಟ್ ಆಗಿದೆ.
ನನ್ನನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದರು. ಅಕೌಂಟ್ ಸ್ಟಾಪ್ ಮಾಡಿಸಿದ್ದಾರೆ. ಇದರಿಂದಾಗಿ ಉದ್ಯೋಗಿಗಳಿಗೆ ಸಂಬಳ ನೀಡಲು, ವಿದ್ಯಾರ್ಥಿಗಳಿಂದ ಫೀಸ್ ಪಡೆಯಲು ತೊಂದರೆಯಾಗಿ ಇಡೀ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಅದಲ್ಲದೆ ಇದೀಗ ತಂದೆಯವರು ಅಕಾಡೆಮಿ ನಿರ್ದೇಶಕರಾಗಿ ನೇಮಕ ಮಾಡಿದ್ದ ಡಾ| ಜ್ಯೊತಿ ಆರ್ ಪ್ರಸಾದರನ್ನೂ ತೆಗೆದಿದ್ದಾರೆ ಡಾ| ಅಭಿಜ್ಞಾರನ್ನು ತೆಗೆದಿದ್ದಾರೆ. ಜಗದೀಶ್ ಅಡ್ತಲೆ ಹಾಗೂ ಮೀನಾಕ್ಷಿ ಹೇಮನಾಥರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಮೀಟಿಂಗ್‌ಗಳನ್ನು ಮಾಡಿ ಪೇರೆಂಟ್ ಮೆಂಬರ್‌ಗಳನ್ನೂ ಕರೆಯದೆ ಈ ರೀತಿ ನಿರ್ಣಯಗಳನ್ನು ಮಾಡಿದರೆ ಅದು ಊರ್ಜಿತವಲ್ಲ ಎಂದು ನಾನು ಕೋರ್ಟ್‌ಲ್ಲಿ ಫೈಟ್ ಮಾಡುವವನಿದ್ದೇನೆ. ಅವರ ದೌರ್ಜನ್ಯ ಮಿತಿ ಮೀರುತ್ತಿರುವುದರಿಂದ ಉಗ್ರ ಹೋರಾಟಕ್ಕೆ ಕರೆ ನೀಡುತ್ತಿದ್ದೇನೆ. ಡಿ.23ರಿಂದ ನಮ್ಮ ವಿದ್ಯಾಸಂಸ್ಥೆಗಳ ಸಿಬ್ಬಂದಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ನ್ಯಾಯ ಸಿಗುವವರೆಗೆ ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಎಂದು ಡಾ| ರೇಣುಕಾಪ್ರಸಾದ್ ಕೆ.ವಿ. ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಒಗ್ಗಟ್ಟಿನಲ್ಲಿ ಹೋದರೆ ಏನೂ ಸಮಸ್ಯೆ ಇರುವುದಿಲ್ಲ. ಮಾತುಕತೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸಾಧ್ಯವಿದೆ. ಇದು ಸೊಸೈಟಿ ಆಕ್ಟ್ ಪ್ರಕಾರ ಮುನ್ನಡೆಯುತ್ತಿರುವ ಸಂಸ್ಥೆ. ಆದ್ದರಿಂದ ಮಾತುಕತೆ ಮಾಡಿ ವಿವಾದ ಇತ್ಯರ್ಥ ಪಡಿಸಬೇಕೆಂದು ಸಮಾಜ ಮುಖಂಡರು ಆದಿಚುಂಚನಗಿರಿ ಪೀಠಾಧಿಪತಿಯವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಉಜ್ವಲ್ ಯು.ಜೆ. ಮಾತನಾಡಿ ಕೆ.ವಿ.ಜಿ. ವಿದ್ಯಾಸಂಸ್ಥೆಯ ಪ್ರಾಂಶುಪಾಲರಿಗೆ ವಾರಕ್ಕೊಂದರಂತೆ ನೊಟೀಸ್ ಬರುವುದರಿಂದ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಂಸ್ಥೆಗಳು ಉತ್ತಮ ರೀತಿಯಲ್ಲಿ ಮುಂದುವರಿಬೇಕು. ಮೊದಲಿನಂತೆ ಎಲ್ಲರೂ ಒಟ್ಟಾಗಿರಬೇನ್ನುವುದು ನಮ್ಮ ಬೇಡಿಕೆ ಎಂದ ಅವರು, ನಾಳಿದ್ದು ಬಹಿಷ್ಕಾರ ನಡೆಯುವ ಸಂದರ್ಭ ಇದಕ್ಕೆ ಸಂಬಂಧಪಟ್ಟವರು ನಮಗೆ ಸೂಕ್ತ ಉತ್ತರ ನೀಡುವ ವರೆಗೆ ನಮ್ಮ ಬಹಿಷ್ಕಾರ ಮುಂದುವರಿಯಲಿದೆ ಎಂದು ಹೇಳಿದರು.

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ| ಸುರೇಶ್ ಮಾತನಾಡಿ ಕೊರೊನಾ ಟೈಂನಲ್ಲಿ ವಿದ್ಯಾಸಂಸ್ಥೆಯ ಅಡ್ಮಿಷನ್ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಎಲ್ಲ ಸೀಟುಗಳು ಭರ್ತಿಯಾಗಿದೆ. ನಾವೆಲ್ಲರೂ ಸಂಸ್ಥೆ ಬೆಳೆಯಲು ಸಹಕಾರ ನೀಡಿದ್ದೇವೆ. ಇತ್ತೀಚೆಗೆ ನಮಗೆ ನೋಟೀಸ್ ಬರುವುದರಿಂದ ಕೆಲಸದಲ್ಲಿ ಡಿಸ್ಟರ್ಬ್ ಆಗುತ್ತಿದೆ. ಇದೆಲ್ಲಾ ನಮಗೆ ಹೊಸತು. ಆದ್ದರಿಂದ ವ್ಯವಸ್ಥೆ ಸರಿಯಾಗಬೇಕೆನ್ನುವುದು ನಮ್ಮ ಕೇಳಿಕೆ ಎಂದು ಹೇಳಿದರು.

ಕೆ.ವಿ.ಜಿ. ಐ.ಟಿ.ಐ. ಕಾಲೇಜು ಅಧೀಕ್ಷಕ ಭವಾನಿಶಂಕರ್ ಅಡ್ತಲೆ ಮಾತನಾಡಿ ಕುರುಂಜಿಯವರ ವಿದ್ಯಾ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇಲ್ಲಿ 2 ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಿರುವಾಗ ಇವರೊಳಗಿನ ಭಿನ್ನಾಭಿಪ್ರಾಯದಿಂದಾಗಿ ನಮಗೆ ಸರಿಯಾಗಿ ಕೆಲಸ ಮಾಡಲಾಗದ ಸ್ಥಿತಿ ಇದೆ. ಕೋರ್ಟ್ ನೋಟೀಸು ಬರುತ್ತಾ ಇದೆ. ನಾವು ಒತ್ತಡದಲ್ಲಿ ಸಿಲುಕಿದ್ದೇವೆ. ಆದ್ದರಿಂದ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ವಿದ್ಯಾಸಂಸ್ಥೆಗಳ ಈ ಹಿಂದಿನಂತೆ ಎಲ್ಲರೂ ಒಟ್ಟಾಗಿ ಹೋಗಬೇಕೆನ್ನುವುದೇ ನಮ್ಮೆಲ್ಲರ ಆಶಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ| ಜ್ಯೋತಿ ಆರ್ ಪ್ರಸಾದ್, ಕೆ.ವಿ.ಜಿ. ಡೆಂಟಲ್ ಕಾಲೇಜು ಪ್ರಾಂಶುಪಾಲೆ ಡಾ| ಮೋಕ್ಷ ನಾಯಕ್, ಕೆ.ವಿ.ಜಿ. ಪಾಲಿಟೆಕ್ನಿಕ್ ಪಾಂಶುಪಾಲ ಜಯಪ್ರಕಾಶ್ ಕೆ, ಕೆ.ವಿ.ಜಿ. ಐಟಿಐ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ, ಭಾಗಮಂಡಲ ಕೆ.ವಿ.ಜಿ. ಐಟಿಐ ಪ್ರಾಂಶುಪಾಲ ಶ್ರೀಕಾಂತ್, ಕೆ.ವಿ.ಜಿ. ಅಮರಜ್ಯೋತಿ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಾ ಯಶೋಧ ರಾಮಚಂದ್ರ, ಕೆವಿಜಿ ಐಪಿಎಸ್ ಪ್ರಾಂಶುಪಾಲ ಸುನಿಲ್ ಕುಮಾರ್, ಕೆವಿಜಿ ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಮಾಧವ ಬಿ.ಟಿ., ಕೆ.ವಿ.ಜಿ. ಐಟಿಐ ಉಪಪ್ರಾಂಶುಪಾಲ ದಿನೇಶ್ ಮಡ್ತಿಲ, ಆಡಳಿತ ಮಂಡಳಿ ಸದಸ್ಯ ಡಾ| ಮನೋಜ್ ಅಡ್ಡಂತಡ್ಕ, ಕೆ.ವಿ.ಜಿ.ಪಿ ಉಪಪ್ರಾಂಶುಪಾಲ ಶ್ರೀಧರ್ ಎಸ್.ಕೆ., ಎ.ಒ.ಎಲ್.ಇ. ಕಚೇರಿ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆ.ವಿ.ಜಿ.ಪಿ. ಅಧೀಕ್ಷಕ ಶಿವರಾಮ ಕೇರ್ಪಳ, ಕೆ.ವಿ.ಜಿ. ಇ.ಸಿ. ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಭಾಗಮಂಡಲ ಕೆ.ವಿ.ಜಿ. ಐಟಿಐ ಅಧೀಕ್ಷಕ ವಿನೋದ್ ಭಾಗಮಂಡಲ, ಎಒಎಲ್‌ಇ ಆಡಳಿತ ಲೆಕ್ಕಪತ್ರಾಧಿಕಾರಿ ಪದ್ಮನಾಭ, ಕೆ.ವಿ.ಜಿ. ಐಪಿಎಸ್ ಆಡಳಿತಾಧಿಕಾರಿ ತೃಪ್ತಿ, ಸುಳ್ಯ ಕೆ.ವಿ.ಜಿ.ಪಿ. ಕಮಲಾಕ್ಷ ಇದ್ದರು.