ಜ.21-22 ರಂದು ಸಂಪಾಜೆ ಸಹಕಾರಿ ಸಂಘ ಶತಮಾನೋತ್ಸವ, ಜ.1, 2 ಮತ್ತು 8 ರಂದು ಶತ ಸಂಭ್ರಮದ ಕ್ರೀಡಾಕೂಟ : ಸಾಂಸ್ಕೃತಿಕ ಸ್ಪರ್ಧೆಗಳು

0

1921 ರಲ್ಲಿ ಆರಂಭಗೊಂಡ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂರು ವರುಷ ತುಂಬಿದ ಹಿನ್ನಲೆಯಲ್ಲಿ 2023 ರ ಜನವರಿ 21 ಮತ್ತು 22 ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆ ಪ್ರಯುಕ್ತ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜ.1 ಮತ್ತು 2ರಂದು ಹಾಗೂ 8ರಂದು ಸಂಪಾಜೆಯ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಶತಮಾನೋತ್ಸವ ಕ್ರೀಡಾಕೂಟ ಸಮಿತಿಯ ಸಂಚಾಲಕ ಜಗದೀಶ್ ಕೆ.ಪಿ. ಹೇಳಿದರು.

ಡಿ.22 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಕಾರ್ಯಕ್ರಮದ ವಿವರ ನೀಡಿದರು.

ಜ.1 ರಂದು ಸುಳ್ಯ ತಾಲೂಕಿನ ಸಹಕಾರ ಸಂಘದ ಸದಸ್ಯ ಪುರುಷರಿಗೆ ಹಗ್ಗಜಗ್ಗಾಟ, ಗುಡ್ಡಗಾಡು ಓಟ, ಮಹಿಳೆಯರಿಗೆ ತ್ರೋಬಾಲ್ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ.
ತಾಲೂಕಿನ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಲಗೋರಿ ಪಂದ್ಯಾಟ.

ಸಾಂಸ್ಕೃತಿಕ ಸ್ಪರ್ಧೆ ಯಲ್ಲಿ ಮಹಿಳಾ / ಪುರುಷ ಸದಸ್ಯರಿಗೆ ಸೋಭಾನೆ, ನೇಜಿ ಪಾಡ್ದನ, ರೈತಗೀತೆ (ತಂಡದಲ್ಲಿ 4 ಜನ).

ಜ.8 ರಂದು ಪುರುಷರಿಗೆ ಮೂವತ್ತು ಗಜಗಳ ಸೀಮಿತ ಓವರಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಜ.1 ರಂದು ಸಂಪಾಜೆ ಗ್ರಾಮಕ್ಕೆ ಸೀಮಿತವಾಗಿ ಪುರುಷರಿಗೆ ಗುಡ್ಡಗಾಡು ಓಟ, ಭಾರದ ಗುಂಡೆಸೆತ, ಕಣ್ಣಿಗೆ ಬಟ್ಟೆ ಕಟ್ಟಿ ನಿಧಿ ಶೋಧ, ಮೂರು ಕಾಲಿನ ಓಟ, ಅಂಗಿಗೆ ಗುಬ್ಬಿ ಹಾಕಿ ಓಡುವುದು ( 50 ವರ್ಷ ಮೇಲ್ಪಟ್ಟವರಿಗೆ), ಹಗ್ಗ ಜಗ್ಗಾಟ, ಲಗೋರಿ, ಮಹಿಳೆಯರಿಗೆ ಗುಡ್ಡಗಾಡು ಓಟ, ಭಾರದ ಗುಂಡೆಸೆತ, ಕಣ್ಣಿಗೆ ಬಟ್ಟೆ ಕಟ್ಟಿ ನಿಧಿ ಶೋಧ, ನಿಂಬೆ ಚಮಚ ಓಟ, ಗೋಣಿ ಚೀಲ ಓಟ, ವಿಷ ವರ್ತುಲ, ಹಗ್ಗಜಗ್ಗಾಟ, ಲಗೋರಿ, ಪುಕ್ಕದ ಚೆಂಡು (ಶಟಲ್ ಕಾಕ್ – 2ಜನ) ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ.

ಜ.2 ರಂದು 6 ವರ್ಷ ಕೆಳಗಿನ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವುದು. 2 ನೇ ತರಗತಿ ಮಕ್ಕಳಿಗೆ 50 ಮೀ. ಓಟ, 3 ರಿಂದ 5 ನೇ ಮಕ್ಕಳಿಗೆ 100 ಮೀಟ ಓಟ, 6 ರಿಂದ 7 ತರಗತಿ ವಿದ್ಯಾರ್ಥಿಗಳಿಗೆ, 8,9 ಹಾಗೂ 10 ನೇ ತರಗತಿ ಯವರಿಗೆ 100 ಮೀ ಓಟ, 4*100 ಮೀ ರಿಲೇ. ( ಹುಡುಗ/ ಹುಡುಗಿಯರಿಗೆ ಪ್ರತ್ಯೇಕ).

ಜ.8 ರಂದು ಪುರುಷರಿಗೆ ಕಬ್ಬಡ್ಡಿ, ಶೂಟಿಂಗ್, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ದ್ವಿಚಕ್ರ ವಾಹನ ನಿಧಾನ ಚಾಲನೆ.
ಮಹಿಳೆಯರಿಗೆ – ತ್ರೋಬಾಲ್, ಕುಂಟೆ ಬಿಲ್ಲೆ, ದ್ವಿಚಕ್ರ ವಾಹನ ನಿಧಾನ ಚಾಲನೆ.

ಜ.1 ರಂದು ಸಾಂಸ್ಕೃತಿಕ ಸ್ಪರ್ಧೆಗಳು ಸಂಪಾಜೆ ಗ್ರಾಮದವರಿಗೆ ಸೀಮಿತವಾಗಿ ನಡೆಯಲಿದ್ದು, ಪುರುಷರಿಗೆ ದೇಶ ಭಕ್ತಿಗೀತೆ, ಜಾನಪದಗೀತೆ, ಭಾವಗೀತೆ, ಗೀಗೀ ಪದ.
ಮಹಿಳೆಯರಿಗೆ – ದೇಶ ಭಕ್ತಿ ಗೀತೆ, ಸೋಭಾನೆ, ಭಾವಗೀತೆ, ನೇಜಿ ಪಾಡ್ದನ.
ಜ.2 ರಂದು ಸಂಪಾಜೆ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ. ಪ್ರಬಂಧ, ದೇಶ ಭಕ್ತಿ ಗೀತೆ, ಲಾವಣಿ, ಛದ್ಮವೇಷ ನಡೆಯುವುದು ಎಂದವರು ವಿವರ ನೀಡಿದರು.

ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಮಾತನಾಡಿ “1921 ರಂದು ಸಹಕಾರಿ ಸಂಘ ಆರಂಭವಾಗಿದ್ದು ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜ.1 ರಂದು ಕ್ರೀಡಾಕೂಟ ನಡೆಯಲಿದ್ದು, ಸಂಪಾಜೆ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಅಧ್ಯಕ್ಷತೆ ವಹಿಸುವರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಲ್ಯೊಟ್ಟು ಉದ್ಘಾಟನೆ ನೆರವೇರಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್.ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ವಿವರ ನೀಡಿದ ಅವರು
ಜ.21 ಮತ್ತು 22 ರಂದು ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದವರು ಹೇಳಿದರು.

ಸಂಪಾಜೆ ಸಹಕಾರ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರುಗಳಾದ ಚಂದ್ರಶೇಖರ ಕೆ.ಯು., ಹಮೀದ್ ಹೆಚ್, ಪ್ರಚಾರ ಸಮಿತಿ ಸಂಚಾಲಕ ಜಿ.ಕೆ.ಹಮೀದ್, ಸದಸ್ಯ ರಹೀಂ ಬೀಜದಕಟ್ಟೆ, ಸನ್ಮಾನ ಸಮಿತಿ ಸಂಚಾಲಕ ದಾಮೋದರ ಮಾಸ್ತರ್ ಇದ್ದರು.