ಆದಿಚುಂಚನಗಿರಿ ಸ್ವಾಮೀಜಿ ಸಲಹೆ ಮೇರೆಗೆ ನಾಳಿನ ಪ್ರತಿಭಟನೆ ಹಿಂಪಡೆಯಲು ಡಾ.ರೇಣುಕಾಪ್ರಸಾದ್ ನೇತೃತ್ವದ ವಿದ್ಯಾಸಂಸ್ಥೆಗಳ ಉದ್ಯೋಗಿಗಳ ನಿರ್ಧಾರ

0

ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಾದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರು ಮತ್ತು ಕೆಲವು ನಿರ್ದೇಶಕರು, ಡಾ.ರೇಣುಕಾಪ್ರಸಾದ್, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ ಪ್ರಸಾದ್ ರನ್ನು ಅಕಾಡೆಮಿಯ ಹುದ್ದೆಗಳಿಂದ ಬದಲಾಯಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ಪ್ರಾಂಶುಪಾಲರುಗಳಿಗೆ ಶಿಸ್ತುಕ್ರಮದ ನೋಟೀಸಿನ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ನಾಳೆಯಿಂದ ಕೈಗೊಳ್ಳಲು ನಿರ್ಧರಿಸಿದ್ದ ಮೌನ ಪ್ರತಿಭಟನೆಯನ್ನು ಆದಿಚುಂಚನಗಿರಿ ಪೀಠಾಧ್ಯಕ್ಷರ ಸಲಹೆಯ ಮೇರೆಗೆ ಹಿಂತೆಗೆದುಕೊಳ್ಳಲು ರೇಣುಕಾಪ್ರಸಾದರ ನೇತೃತ್ವದ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳು ನಿರ್ಧರಿಸಿದ್ದಾರೆ.

ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸುಳ್ಯ ತಾಲೂಕಿನಲ್ಲಿ ಮೂರು ದಿನಗಳಿಂದ ಗ್ರಸಮವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಇಂದು ಸಂಜೆ ಡಾ.ರೇಣುಕಾಪ್ರಸಾದರ ಮನೆಗೆ ಪಾದಪೂಜೆಗೆ ಬಂದಿದ್ದಾಗ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು ಸ್ವಾಮೀಜಿಯವರಿಗೆ ಮನವಿ ನೀಡಿ, ಅಕಾಡೆಮಿಯ ಅಧ್ಯಕ್ಷರಾದ ಡಾ.ಚಿದಾನಂದ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ.ರೇಣುಕಾಪ್ರಸಾದ್ ರವರ ನಡುವಿನ ಭಿನ್ನಾಭಿಪ್ರಾಯವನ್ನು ಮಾತುಕತೆಯಲ್ಲಿ ಬಗೆಹರಿಸಬೇಕು. ಅವರ ಭಿನ್ನಾಭಿಪ್ರಾಯದಿಂದಾಗಿ ಸಂಸ್ಥೆಯ ಉದ್ಯೋಗಿಗಳಿಗೆ ಅಭದ್ರತೆ ಕಾಡತೊಡಗಿದೆ.

ಕುರುಂಜಿಯವರು ಸ್ಥಾಪಿಸಿದ ವಿದ್ಯಾಸಂಸ್ಥೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ” ಎಂದು ವಿನಂತಿಸಿಕೊಂಡರು. ಆ ಸಂದರ್ಭ ನಿರ್ಮಲಾನಂದನಾಥ ಸ್ವಾಮೀಜಿಯವರು, ” ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ” ಭರವಸೆ ನೀಡಿದರೆನ್ನಲಾಗಿದೆ.
ಆ ಹಿನ್ನೆಲೆಯಲ್ಲಿ ಡಾ.ರೇಣುಕಾಪ್ರಸಾದ್ ಹಾಗೂ ಉದ್ಯೋಗಿಗಳು ದ.23 ರಿಂದ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಳಿಸಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

It is hereby informed that, as per the advice of His Holiness Sri Sri Sri Dr.Nirmalananda Swamiji of Adichunchanagiri Matt, the silent protest scheduled from 23rd of December 2022 has been withdrawn.
Hence tomorrow will observe as a regular academic day. – Dr. Renuka Prasad KV