ನಗರ ಪಂಚಾಯತ್ ವಠಾರದ ಕಸದ ರಾಶಿ ತೆರವಿಗೆ ಜಿಲ್ಲಾಧಿಕಾರಿ ಗಡುವು, ನಗರ ಪಂಚಾಯತ್ ಡಿಸಿ‌ ಭೇಟಿ : ಮುಖ್ಯಾಧಿಕಾರಿಗೆ ತರಾಟೆ

0

ಸುಳ್ಯ ನಗರ ಪಂಚಾಯತ್ ಕಚೇರಿ ಆವರಣದಳಲ್ಲಿ ತುಂಬಿಡಲಾಗಿರುವ ಕಸದ ರಾಸಶಿಯನ್ನು ನೋಡಿ ದ.ಕ.ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮುಖ್ಯಾಧಿಕಾರಿ ಗಳನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ರವರು ಸುಳ್ಯ ನಗರ ಪಂಚಾಯತ್‌ಗೆ ಡಿ.27 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನ.ಪಂ. ಎದುರಿನ ಶೆಡ್ ಹಾಗೂ ಹಿಂಬದಿ ರಾಶಿ ಹಾಕಲಾದ ಕಸವನ್ನು ನೋಡಿದ ಜಿಲ್ಲಾಧಿಕಾರಿ ಗಳು ಸಿಡಿಮಿಡಿಗೊಂಡರು.

ರಾಶಿಯನ್ನು ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಕಸ ಸಾಗಾಟಕ್ಕೆ ಟೆಂಡರ್ ಮಾಡಲು ಕಡತಗಳನ್ನು ಸಿದ್ಧಪಡಿಸಿ ತಕ್ಷಣ ಕಳಿಸುವಂತೆ ಅವರು ಮುಖ್ಯಾಧಿಕಾರಿಗಳಿಗೆ ಆದೇಶ ನೀಡಿದರು.

ಈ ರೀತಿ ಕಸದ ರಾಶಿ ಹಾಕಿರುವುದರಿಂದ ಈ ಕಸದಿಂದ ಮಲಿನಗೊಂಡ ನೀರು ಹರಿದು ಹಳ್ಳ ಕೊಳ್ಳಗಳನ್ನು ಸೇರುತ್ತದೆ. ಅಲ್ಲದೆ ಭೂಮಿಗೆ ಇಂಗಿ ಬೋರ್‌ವೆಲ್‌ಗಳಿಗೂ ಸೇರಿ ನೀರು ಮಲಿನಗೊಳ್ಳುವ ಅಪಾಯ ಇದೆ. ನೀರು ಮಲಿನವಾದರೆ ಜಾಂಡೀಸ್, ಮಲೇರಿಯಾ, ಡೆಂಗ್ಯೂ, ಇಲಿ ಜ್ಚರ ಸೇರಿದಂತೆ ಸಾಂಕ್ರಾಮಿ ರೋಗಗಳು ಹರಡುವ ಸಾಧ್ಯತೆ ಇದೆ. ಇಲ್ಲಿ ಹಾಕಿದ ಕಸದಲ್ಲಿ ಸೊಳ್ಳೆ ಉತ್ಪಾದನೆ ಮಾಡಿ ನಗರ ಪಂಚಾಯತ್ ವತಿಯಿಂದ ಇಡೀ ತಾಲೂಕಿಗೆ ರೋಗ ಹರಡುತ್ತೀರಾ ಎಂದು ಮುಖ್ಯಾಧಿಕಾರಿ ಗಳನ್ನು ಪ್ರಶ್ನಿಸಿದರು.

ನಗರ ಪಂಚಾಯತ್ ಶೆಡ್‌ನಲ್ಲಿ ಮತ್ತು ಕಚೇರಿ ಹಿಂಭಾಗದಲ್ಲಿ ತುಂಬಿರುವ ಕಸದ ರಾಶಿಯನ್ನು ತೆರವು ಮಾಡಲು ಕೂಡಲೇ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು. ಟನ್‌ಗೆ ಇಷ್ಟು ಎಂದು ದರ ನಿಗದಿಪಡಿಸಿ ಟೆಂಡರ್ ಕರೆಯಲು ಕಡತ ಸಿದ್ಧಪಡಿಸಿ ಇಂದೇ ಕಡತವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಕೊಡುವಂತೆ ಅವರು ಮುಖ್ಯಾಧಿಕಾರಿಗೆ ಆದೇಶ ನೀಡಿದರು. ಒಣ ಕಸವನ್ನು ಮತ್ತು ಪ್ಲಾಸ್ಟಿಕ್‌ಗಳು ಸಿಮೆಂಟ್ ಉತ್ಪಾದನೆಗೆ, ಮತ್ತು ಡಾಮರ್‌ಗೆ ಇದನ್ನು ಬಳಸಬಹುದು. ಆದುದರಿಂದ‌ ಕಸವನ್ನು ಅಂತಹಾ ಕಂಪೆನಿಗಳಿಗೆ ನೀಡಲು ಕ್ರಮ ಕೈಗೊಳ್ಳಿ ಎಂದು ಅವರು ಸಲಹೆ ನೀಡಿದರು.

ತಹಶೀಲ್ದಾರ್ ಅನಿತಾಲಕ್ಷ್ಮಿ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ಸದಸ್ಯರಾದ ಶರೀಫ್ ಕಂಠಿ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಡೇವಿಡ್‌ ಧೀರಾ ಕ್ರಾಸ್ತಾ, ಸುಶೀಲಾ ಜಿನ್ನಪ್ಪ, ಕಿಶೋರಿ ಶೇಠ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.