ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗ ದೈವ ಹಾಗೂ ಶ್ರೀ ಕೊರಗಜ್ಜ ದೈವಸ್ಥಾನದ ಶುದ್ಧಿ ಕಲಶೋತ್ಸವ

0

ಸುಳ್ಯ ಜಯನಗರದ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗ ದೈವ ಹಾಗೂ ಶ್ರೀ ಕೊರಗಜ್ಜ ದೈವಸ್ಥಾನದ ಶುದ್ಧಿ ಕಲಶೋತ್ಸವ ಡಿ.೩೦ರಂದು ನಡೆಯಿತು.
ಬೆಳಗ್ಗೆ ಹಳೆಗೇಟು ಶ್ರೀ ವಸಂತ ಕಟ್ಟೆ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ಬೆಳ್ಳಿ ಕಲಶ ಹಾಗೂ ದೈವಸ್ಥಾನದ ಮುಗುಳಿಯು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಭಜನೆ ಹಾಗೂ ಚೆಂಡೆವಾದನಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು.


ದ್ವಾರ ಉದ್ಘಾಟನೆ : ದೈವಸ್ಥಾನದ ಎದುರಿನಲ್ಲಿ ನಿರ್ಮಿಸಲಾಗಿದ್ದ ದೈವಸ್ಥಾನದ ಪ್ರವೇಶ ದ್ವಾರದ ಉದ್ಘಾಟನೆಯನ್ನು ಸುಳ್ಯ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ನೆರವೇರಿಸಿದರು. ನ.ಪಂ. ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಿಂಕೇರಿ, ಶ್ರೀಮತಿ ಶಿಲ್ಪಾ ಸುದೇವ್, ರೋಹಿತ್ ಕೊಯಿಂಗೋಡಿ, ಕೊರಂಬಡ್ಕ ಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಸುಂದರ ಕುದ್ಪಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ಸಭೆ – ಸನ್ಮಾನ : ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಿತು. ಸುಳ್ಯ ಶಾಸಕ ಹಾಗೂ ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು.
ತುಳು ಸಾಹಿತ್ಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕೆ.ಮಹೇಂದ್ರನಾಥ್ ಸಾಲೆತ್ತೂರು ಧಾರ್ಮಿಕ ಉಪನ್ಯಾಸಗೈದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶೀಲ್ಪಾ ಸುದೇವ್, ಶ್ರೀಮತಿ ಶಶಿಕಲಾ ನೀರಬಿದಿರೆ, ಜಯನಗರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಭಾಗವಹಿಸಿದ್ದರು.
ಸನ್ಮಾನ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಬಂಗ್ಲೆಗುಡ್ಡೆ, ಸ್ವಾಮಿ ಮೈಕ್ಸ್‌ನ ಮಾಲಕ ಶ್ರೀಧರ್ ಜಯನಗರ, ದೈವಸ್ಥಾನದ ಶುದ್ಧಿ ಕಲಶೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ್ ಬಳ್ಳಾರಿ, ಆಡಳಿತ ಸಮಿತಿ ಕಾರ್ಯದರ್ಶಿ ಸುಂದರ ಕುದ್ಪಾಜೆ, ಆಡಳಿತ ಸಮಿತಿಯ ಸಂಚಾಲಕ ಜಗನ್ನಾಥ ಜಯನಗರರನ್ನು ಸನ್ಮಾನಿಸಲಾಯಿತು.


ಸಭಾಭವನಕ್ಕೆ ಬೇಡಿಕೆ : ಜಗನ್ನಾಥ ಜಯನಗರ ಹಾಗೂ ಕೇಶವ ಮಾಸ್ತರ್ ಹೊಸಗದ್ದೆಯವರು ತಮ್ಮ ಮಾತಿನಲ್ಲಿ ಕೊರಂಬಡ್ಕ ಕ್ಷೇತ್ರದ ಅಭಿವೃದ್ಧಿಯ ಕುರಿತು ವಿವರಿಸಿದರಲ್ಲದೆ, ದೈವಸ್ಥಾನದ ಪಕ್ಕದಲ್ಲೇ ಇರುವ ವಿಸ್ತಾರವಾದ ಜಾಗದಲ್ಲಿ ಸಭಾಭವನದ ಬೇಡಿಕೆಯನ್ನು ಮುಂದಿಟ್ಟರು. ಅಧ್ಯಕ್ಷತೆ ವಹಿಸಿದ ಸಚಿವ ಎಸ್.ಅಂಗಾರರು ತಮ್ಮ ಭಾಷಣದಲ್ಲಿ ಇಲ್ಲಿಯ ಸಭಾಭನವ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.
ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯ ರೋಹಿತ್ ಕೊಯಿಂಗೋಡಿ ಸ್ವಾಗತಿಸಿದರು. ಆಡಳಿತ ಸಮಿತಿಯ ಸಂಚಾಲಕ ಜಗನ್ನಾಥ ಜಯನಗರ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಕೇಶವ ಸಿ.ಎ. ದೈವಸ್ಥಾನದ ಅಭಿವೃದ್ಧಿಯ ವಿವರ ನೀಡಿದರು. ಜಗನ್ನಾಥ ಜಯನಗರ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.