ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ

0

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ವತಿಯಿಂದ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಬೆಂಗಳೂರು ಇಲ್ಲಿ ಸಮಾಜದ ಅಧ್ಯಕ್ಷರಾದ ರವೀಂದ್ರನಾಥ್ ಕೇವಳರವರ ಅದ್ಯಕ್ಷತೆಯಲ್ಲಿ ಸ್ನೇಹ- ಮಿಲನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜ.08 ರಂದು ನಡೆಯಿತು.
ಡಾ|| ರೇಣುಕಾ ಪ್ರಸಾದ್ .ಕೆ .ವಿ. ಉಪಾಧ್ಯಕ್ಷರು ರಾಜ್ಯ ಒಕ್ಕಲಿಗರ ಸಂಘ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ನೇಹಾ ರವಿಂದ್ರ ಹಾಗೂ ಕುಮಾರಿ ಭೂಮಿಕ ಬಂಟೋಡಿಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಎಸ್ .ಎಸ್ .ಎಲ್.ಸಿ.ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸಮುದಾಯದ ಸುಮಾರು 25 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಸಮಾಜದ 10 ಮಂದಿ ರಾಂಕ್ ವಿಜೇತರನ್ನು ಸನ್ಮಾನಿಸಲಾಯಿತು. ಅಲ್ಲದೆ ಕ್ರೀಡೆ, ಮಾಧ್ಯಮ, ವೈದ್ಯಕೀಯ, ಸಮಾಜಮುಖಿ ಇಂತಹ ವಿವಿಧ ಕ್ಷೇತ್ರಗಳಲ್ಲಿನ ಅತುನ್ನತ ಸಾಧನೆಯನ್ನು ಗುರುತಿಸಿ ಸಮಾಜದ 6 ಮಂದಿಯನ್ನು ಸಾಧಕರನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಯಾಗಿ ಆಗಮಿಸಿದ ಹಂಪಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ|| ವಿಜಯ್ ಪೂಣಚ್ಚ ತಂಬಂಡ ಅವರನ್ನು ಅಮರ ಸುಳ್ಯ ಸಂಗ್ರಾಮ 1837 ಗ್ರಂಥ ರಚನೆಗಾಗಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ನಮ್ಮ ಕುಲ ಭಾಂದವರು ಒಂದಾಗಿ ಒಗ್ಗಟ್ಟಾಗಿ ಸೇರಿ ತಮ್ಮದೇ ಆದಂತಹ ಸ್ವಂತ ಕಟ್ಟಡವನ್ನು ಕಟ್ಟಿಕೊಂಡು ಸ್ನೇಹ ಮಿಲನ ಎಂಬ ಅರ್ಥಪೂರ್ಣ ಹೆಸರಿನೊಂದಿಗೆ ಅರ್ಥಪೂರ್ಣವಾದ ಕಾರ್ಯಕ್ರಮವನ್ನು, ಸಮಾಜ ಬಾಂಧವರನ್ನು ಅಭಿನಂದಿಸುತ್ತ ಇಂತಹ ಕಾರ್ಯಕ್ರಮಗಳಿಂದ ಕುಟುಂಬ ಕುಟುಂಬಗಳ ಪರಿಚಯ, ಸಂಬಂಧಗಳು, ಹಾಗೂ ಸ್ನೇಹಗಳು ಬೆಳೆಯಲು ಅನುಕೂಲವಾಗುತ್ತದೆ ಎಂದು ನುಡಿದರು. ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಸಮಾಜದ ಯಾವುದೇ ಬಂಧುಗಳು ಮುಂದುವರಿದರೂ ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದರು.
ಡಾ|| ವಿಜಯ ಪೂಣಚ್ಚ ತಂಬಂಡರವರು ತನ್ನ ಉಪನ್ಯಾಸದಲ್ಲಿ ಕೊಡಗು ಪಶ್ಚಿಮ ಘಟ್ಟಗಳ ಚರಿತ್ರೆಯ ಸ್ಥಿಂತ್ಯಂತರಗಳ ಅಧ್ಯಯನ ಮತ್ತು ವಿಮರ್ಶೆಯನ್ನು ಒಳಗೊಂಡ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ 1837ರ ಬಗ್ಗೆ ಮಾತನಾಡುತ್ತಾ ಹಾಲೇರಿ ಅರಸನನ್ನು ಮತ್ತೆ ಕೊಡಗಿನ ಗಾದಿಯಲ್ಲಿ ಕೂರಿಸುವ ಹಾಗೂ ದಕ್ಷಿಣ ಭಾರತದ ಪ್ರಮುಖ ಸಂಸ್ಥಾನಗಳನ್ನು ಇಂಗ್ಲಿಷ್ ಸರ್ಕಾರದ ಸಿಡಿತದಿಂದ ಮುಕ್ತಗೊಳಿಸುವ ಅಗಾಧವಾದ ಕಾರ್ಯಾಚರಣೆಯೇ 1837ರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಎಂದರು.
ಇನ್ನೋರ್ವ ಮುಖ್ಯ ಅತಿಥಿ ದಾಸರಹಳ್ಳಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಆರ್ . ಮಂಜುನಾಥ್ ರವರು ಸಾಧಕರನ್ನು ಸನ್ಮಾನಿಸುತ್ತಾ ದೂರದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಈ ರೀತಿ ಸ್ನೇಹಮಿಲನ ಕಾರ್ಯಕ್ರಮ ಮುಖೇನ ಎಲ್ಲರೂ ಒಟ್ಟು ಸೇರುವುದು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವುದು ಗೌಡ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ವಿಚಾರ ಎಂದು ಸಂಘಟಕರನ್ನು ಶ್ಲಾಘಿಸಿದರು .
ಅರ್ಥಪೂರ್ಣವಾದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳ ಜೊತೆಯಲ್ಲಿ ಅತಿಥಿಗಳಾಗಿ ನಂಗಾರು ನಾಣ ಯ್ಯನವರು, ಎಸ್.ಪಿ. ಶ್ರೀ ಕುಕ್ಕೇಟಿ ವಿಶ್ವನಾಥ್ , ಕೆಡಿಕೆ ಗೌಡ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ರವೀಂದ್ರನಾಥ್ ಕೇವಳರವರು ವಹಿಸಿ ತನ್ನ ಅಧ್ಯಕ್ಷೀಯ ನುಡಿಯಲ್ಲಿ ಕಳೆದ 59 ವರ್ಷಗಳಿಂದ 14 ಅಧ್ಯಕ್ಷರುಗಳನ್ನು ಕಂಡು ಯಶಸ್ವಿಯಾಗಿ ಒಗ್ಗಟ್ಟಿನಿಂದ ಬೆಳೆದು ಬಂದು ಇಂದು ನಾವು ನಮ್ಮದೇ. ಸ್ವಂತ ಕಟ್ಟಡವನ್ನು ಲಗ್ಗೆರೆಯಲ್ಲಿ ಹೊಂದಿರುವುದು ಗೌಡ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹಿಂದಿನ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸಿಕೊಂಡರು. ಮುಂದಿನ ಯೋಜನೆಗಳನ್ನು ಪ್ರಸ್ತಾಪಿಸುತ್ತಾ ಸಮಾಜ ಬಾಂಧವರ ನೆರವಿನ ಹಸ್ತವನ್ನು ಕೇಳಿದರು. ಉಪಾಧ್ಯಕ್ಷರಾದ ಪಾಣತಲೆ ಪಳಂಗಪ್ಪನವರು ಸ್ವಾಗತಿಸಿ ಕಾರ್ಯದರ್ಶಿ ನಾಗೇಶ್ ಕುಮಾರ್ ಕಲ್ಲು ಮುಟ್ಲು ರವರು ವಂದನಾರ್ಪಣೆಗೈದರು. ನಿರೂಪಣೆಯನ್ನು ಶ್ರೀಮತಿ ಲೀಲಾ ಸೋಮಣ್ಣ ಹಾಗೂ ವಿನೋದ್ ಮೂಡಗದ್ದೆ ಯವರು ನೆರವೇರಿಸಿದರು. ವೇದಿಕೆಯಲ್ಲಿ ಶ್ರೀಮತಿ ಜ್ಯೋತಿ ಕುಶಾಲಪ್ಪ , ಕುಂಬಗೌಡನ ಸೋಮಣ್ಣ ಹಾಗೂ ಶ್ರೀಮತಿ ನೇಹಾ ರವೀಂದ್ರ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ನಂಗಾರು ನಿಂಗರಾಜು, ಪದ್ಮಾಕೋಲ್ಚಾರ್, ರಾಜೇಶ್ ತೆನನ, ಸಮಾಜದ ಹಿರಿಯರಾದ ಡಾ||ಕಾವೇರಿ ಮನೆ ಭೋಜಪ್ಪ ಹಾಗೂ ವಿವಿಧ ಸಮಾಜದ ಅಧ್ಯಕ್ಷರುಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾಜದ ಬಾಂಧವರು , ಮಹಿಳಾ ಘಟಕ ಹಾಗೂ ಯುವ ಘಟಕದ ಸದಸ್ಯರು ಅತ್ಯಂತ ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು ಕೊಡಗು ದಕ್ಷಿಣ ಕನ್ನಡ ಗೌಡ ಸಾಂಪ್ರದಾಯಕ ಅಡುಗೆ ಎಲ್ಲರ ಮನಮೆಚ್ಚಿತು.