ಜ.30 : ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘದಿಂದ ಬೃಹತ್ ಸಮಾವೇಶ, ಸುಳ್ಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಒತ್ತಾಯ

0

ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ವತಿಯಿಂದ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಗ್ಯಾರೇಜ್ ಮಾಲಕರ ಹಾಗೂ ನೌಕರರ ಬೃಹತ್ ಮಹಾಸಮಾವೇಶ ಜ.30 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ತಾಲೂಕಿನಿಂದ ಗ್ಯಾರೇಜ್ ಮಾಲಕರು ಹಾಗು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದ ಅವರು ಮಂಗಳೂರು ಬಲ್ಮಠದಿಂದ ಪುರಭವನ ತನಕ ಬೃಹತ್ ಜಾಥಾ ನಡೆಯಲಿದೆ. ಪೂ.10.30ಕ್ಕೆ ಸಮಾವೇಶದ ಉದ್ಘಾಟನೆ ನಡೆಯಲಿದೆ. ಬಳಿಕ ಉಪನ್ಯಾಸ ಮಾಲಿಕೆ, ಗೋಷ್ಠಿಗಳು ನಡೆಯಲಿದೆ. ಅಪರಾಹ್ನ 3 ರಿಂದ 3.30ರ ತನಕ ನಿರ್ಣಯ ಸಭೆ ಸಂಜೆ 4 ರಿಂದ ಸಮಾರೋಪ ಸಮಾರಂಭ, ಗೌರವ ಅಭಿನಂದನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಗ್ಯಾರೇಜ್ ನೌಕರರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಗ್ಯಾರೇಜ್ ನೌಕರರಿಗೂ ಒದಗಿಸಿ ಕೊಡಬೇಕು ಎಂಬ ಬೇಡಿಕೆ ಇದೆ. ಈ ಬೇಡಿಕೆಯನ್ನು ಸಮಾವೇಶದ ಮೂಲಕ ಮಂಡಿಸಲಾಗುವುದು ಎಂದು ಹೇಳಿದರು.

ಸುಳ್ಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಒತ್ತಾಯ:


ಸುಳ್ಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಬೇಕು ಎಂದು ಮಲ್ಲೇಶ ಬೆಟ್ಟಂಪಾಡಿ ಒತ್ತಾಯಿಸಿದರು. ಎಲ್ಲಾ ಕಡೆ ಕೈಗಾರಿಕಾ ವಲಯ ಇದ್ದರೂ ಸುಳ್ಯದಲ್ಲಿ ಕೈಗಾರಿಕಾ ವಲಯ ಇಲ್ಲದೇ ಇರುವುದು ಹಿನ್ನಡೆಯಾಗಿದೆ. ಗ್ಯಾರೇಜ್‌ಗಳು ರಸ್ತೆ ಬದಿಯಲ್ಲಿ ಇರುತ್ತವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ರಸ್ತೆ ಬದಿಯ ಗ್ಯಾರೇಜ್‌ಗಳು ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.ಈ ಸಂದರ್ಭದಲ್ಲಿ ಕೈಗಾರಿಕಾ ವಲಯದಲ್ಲಿ ಒಟ್ಟಿಗೆ ಕಾರ್ಯಾಚರಿಸಲು ಅನುಕೂಲ ಆಗಬಹುದು ಎಂದು ಹೇಳಿದರು. ಸುಳ್ಯ ತಾಲೂಕಿನಲ್ಲಿ ಗ್ಯಾರೇಜ್ ಮಾಲಕರ ಸಂಘ ೨೪ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು ನೌಕರರ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುತಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ ಜನಾರ್ಧನ ದೋಳ, ಕೋಶಾಧಿಕಾರಿ ಗೋಪಾಲ ನಡುಬೈಲು,ಉಪಾಧ್ಯಕ್ಷ ಸತ್ಯನಾರಾಯಣ ಪೈಚಾರ್ ಉಪಸ್ಥಿತರಿದ್ದರು.