ವಿಜೃಂಭಣೆಯಿಂದ ನಡೆದ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

0

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.೧೩ರಿಂದ ಫೆ.೧೯ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.


ಜಾತ್ರೋತ್ಸವದ ಪ್ರಯುಕ್ತ ಫೆ.೧೩ರಂದು ರಾತ್ರಿ ಧ್ವಜಾರೋಹಣ ನಡೆದು, ನಂತರ ಬಲಿ ಹೊರಟು ಉತ್ಸವ, ಶ್ರೀ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಫೆ.೧೪ರಂದು ರಾತ್ರಿ ಬಲಿ ಹೊರಟು ಉತ್ಸವ ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ಓಲೆ ಸವಾರಿ, ಹೊಸಮಜಲು ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಮತ್ತು ಶ್ರೀ ನೇಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮೋತ್ಸವ ಜರುಗಿತು.
ಫೆ.೧೫ರಂದು ಬೆಳಗ್ಗೆ ಬಲಿ ಹೊರಟು ಉತ್ಸವ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ವಸಂತ ಕಟ್ಟೆಯಲ್ಲಿ ಪೂಜೆ ನಡೆಯಿತು.


ಫೆ.೧೬ರಂದು ಬೆಳಗ್ಗೆ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ೭.೦೦ರಿಂದ ಬಲಿ ಹೊರಟು ಉತ್ಸವ ಬಲಿಯೊಂದಿಗೆ ಕೋಲಾಟ, ಮಹಾರಥೋತ್ಸವ, ಪಾಟಾಳಿ ಕಟ್ಟೆ ಪೂಜೆ ಮತ್ತು ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಓಲೆ ಸವಾರಿ ನಡೆಯಿತು. ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ ಮತ್ತು ಶ್ರೀ ದೇವರ ಶಯನೋತ್ಸವ ನೆರವೇರಿತು.
ಫೆ.೧೭ರಂದು ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಪಂಚಾಮೃತಾಭಿಷೇಕ ನಡೆಯಿತು.


ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷರಾದ ಶ್ರೀಹರಿ ನೂಚಿಲ ಮತ್ತು ಆಡಳಿತ ಮಂಡಳಿಯವರು, ವಿವಿಧ ಸಮಿತಿಯ ಪದಾಧಿಕಾರಿಗಳು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.