ಬಿಜೆಪಿಯಿಂದ ಹೊಸ ಅಭ್ಯರ್ಥಿ ಕಣಕ್ಕಿಳಿಸುವುದಾದರೆ ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ಬೇಡ

0

ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಾದರೆ ಅಂಗಾರರನ್ನೇ ಮುಂದುವರೆಸಿ


ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಮನ್ವಯ ವೇದಿಕೆ ಹೆಸರಿನಲ್ಲಿ ಬಿಜೆಪಿಯ ಎಸ್‌ಸಿ ಮುಖಂಡರಿಂದ ಪತ್ರಿಕಾಗೋಷ್ಠಿ


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸುಳ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಹೊರಗಿನಿಂದ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸಬಾರದು. ಆ ರೀತಿ ಮಾಡುವುದಾದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರವರನ್ನು ಮುಂದುವರಿಸಬೇಕೆಂದು ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಮನ್ವಯ ವೇದಿಕೆ ಹೆಸರಿನಡಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ಪರಿಶಿಷ್ಟ ಜಾತಿ ಮುಖಂಡರು ಹೇಳಿಕೆ ನೀಡಿದ್ದಾರೆ.

ಸುಳ್ಯ ಪ್ರಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ, ಸಮಿತಿಯ ಮುಖಂಡ ಸಂಜಯ್ ಕುಮಾರ್ ಪೈಚಾರ್, ಸುಳ್ಯ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಕಳೆದ ಆರು ಅವಧಿಯಲ್ಲಿ ಬಿಜೆಪಿಯಿಂದ ಎಸ್ ಅಂಗಾರ ರವರು ಪ್ರತಿನಿಧಿಯಾಗಿ ಸ್ಪರ್ಧಿಸಿ ಶಾಸಕರಾಗಿ ಸಚಿವರಾಗಿ ಕ್ಷೇತ್ರದಲ್ಲಿ ಓಡಾಟ ನಡೆಸಿ ಹಿಂದೆಂದೂ ಕಂಡರಿಯದಂತಹ ಅಭಿವೃದ್ಧಿಗಳನ್ನು ಮಾಡಿದ್ದಾರೆ. ಇದು ಇಡೀ ತಾಲೂಕಿನ ಜನತೆಗೆ ತಿಳಿದ ವಿಚಾರವಾಗಿದೆ. ಆದರೆ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಬದಲಾವಣೆಯಾಗುತ್ತಾರೆ ಎಂದು ವದಂತಿಗಳು ಇದ್ದು, ಸುಳ್ಯ ವಿಧಾನಸಭಾ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ. ಆದುದರಿಂದ ಸುಳ್ಯ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸರಿಯಲ್ಲ. ಸುಳ್ಯದಲ್ಲಿಯೇ ಅರ್ಹ ಅಭ್ಯರ್ಥಿಗಳು ಇದ್ದಾರೆ. ಅದನ್ನು ಹೊರತುಪಡಿಸಿ ಹೊರಗಿನಿಂದ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಸುವುದಾದರೆ ಎಸ್ ಅಂಗಾರ ರವರನ್ನು ಮುಂದುವರಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮಿತಿಯ ಮತ್ತೋರ್ವ ಮುಖಂಡ ಕೇಶವ ಮಾಸ್ತರ್ ಹೊಸಗದ್ದೆ ಮಾತನಾಡಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಮುಂಬರುವ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಂಕರ್ ಪೆರಾಜೆ, ಚನಿಯ ಕಲ್ತಡ್ಕ, ಮತ್ತೊಂದು ಮಗದೊಂದು ಎಂದು ಹೆಸರುಗಳು ಕೇಳಿ ಬರುತ್ತಿದೆ. ಇದು ಸರಿಯಾದ ವಿಷಯವಲ್ಲ. ಪಕ್ಷದಲ್ಲಿ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಮತ್ತು ಸಂಘಟನೆ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಅದಕ್ಕಿಂತ ಮೊದಲೇ ಬೇರೆ ಬೇರೆ ಹೆಸರುಗಳನ್ನು ಪ್ರಸ್ತಾಪಿಸಿ ಸಮಾಜದಲ್ಲಿ ಅವರಿಗೆ ಮುಜುಗರ ಆಗುವ ರೀತಿಯಲ್ಲಿ ಯಾರು ಕೂಡ ಮಾಡುವುದು ಸರಿಯಲ್ಲ ಎಂದು ಹೇಳಿದರು. ನಮ್ಮಲ್ಲಿ ಎಲ್ಲರೂ ಪಕ್ಷಕ್ಕಾಗಿ ದುಡಿದವರೇ ಇದ್ದಾರೆ. ಆದ್ದರಿಂದ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದನ್ನು ನಾವು ವಿರೋಧಿಸುತ್ತೇವೆ. ಅರ್ಹರು ನಮ್ಮಲ್ಲೇ ಇರುವಾಗ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಅವಕಾಶ ನೀಡಬೇಕೆಂದು ಅವರು ಹೇಳಿದರು.

ಇದೇ ವೇಳೆ ಮಾತನಾಡಿದ ಜಿ ಜಗನ್ನಾಥ ಜಯನಗರ, ಇದು ಯಾರ ಪರವಾಗಿಯೂ ಮಾಡುವಂತ ಪತ್ರಿಕಾಗೋಷ್ಠಿಯಲ್ಲ, ನಮ್ಮೆಲ್ಲರ ಏಕೈಕ ಉದ್ದೇಶ ಒಂದೇ ಆಗಿದೆ. ಹೊರಗಿನವರನ್ನು ತಂದು ಸುಳ್ಯದ ಅಭ್ಯರ್ಥಿಯಾಗಿ ಕಣಕ್ಕಿಳಿಸಬಾರದು. ನಮ್ಮ ಸುಳ್ಯದವರಿಗೆ ಅವಕಾಶವನ್ನು ನೀಡಬೇಕು. ಈ ಚುನಾವಣೆಯ ಹಿತ ದೃಷ್ಟಿಯಿಂದ ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಾಮಾನ್ಯಯ ವೇದಿಕೆಯನ್ನು ರಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಜನಾಂಗದ ಪರವಾಗಿ,ಮತ್ತು ಅವರ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು. ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಇಂದಿಗೂ ಕೂಡ ನಮ್ಮ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರ ಸೇವೆ ಅಭಿವೃದ್ಧಿಗಾಗಿ ಈ ವೇದಿಕೆ ಕಾರ್ಯಚರಿಸಲಿದೆ ಎಂದು ಹೇಳಿದರು.
ಮುಖಂಡ ಚನಿಯ ಕಲ್ತಡ್ಕ ರವರು ಮಾತನಾಡಿ ನಮ್ಮೆಲ್ಲರ ಕೋರಿಕೆ ಒಂದೇ ಆಗಿದೆ. ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿಗಳನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿಸಬಾರದು. ಸುಳ್ಯದಿಂದಲೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮುಖಂಡರುಗಳಾದ ಶಂಕರ್ ಪೆರಾಜೆ, ಅಚ್ಚುತ ಗುತ್ತಿಗಾರು, ಪ್ರಕಾಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು.