ದ. ಕ .ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಮತ್ತು ಜಾರಿ ವಿಶೇಷ ಕಾರ್ಯ

0

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಯೋಜನಾ ಪತ್ರ ವಿತರಣೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಮತ್ತು ಜಾರಿ ವಿಶೇಷ ಕಾರ್ಯಪಡೆಯ ಯೋಜನೆ ಆರಂಭಗೊಂಡಿದ್ದು ಈ ಯೋಜನೆಯಲ್ಲಿ ತಾಲೂಕಿನ ಬುಡಕಟ್ಟು ಜನರ ಬಳಿ ತೆರಳಿ ಅವರಿಗೆ ಸರಕಾರಿ ಸೌಲಭ್ಯಗಳು ಸಿಗದೇ ಇರುವ ಅಂಶಗಳನ್ನು ದಾಖಲಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ.

ಈ ಕಾರ್ಯಕ್ರಮದ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರ ನೇತೃತ್ವದಲ್ಲಿ ಸುಳ್ಯ ನ್ಯಾಯಾಲಯದಲ್ಲಿ ಸಭೆ ಸೇರಲಾಗಿತ್ತು. ಈ ಸಂದರ್ಭದಲ್ಲಿ
ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಮತ್ತು ಜಾರಿ ವಿಶೇಷ ಕಾರ್ಯ ಸುಳ್ಯ ತಾಲೂಕು ಪರಿಸರದ ಬಾಳಿಲ ಮತ್ತು ಸುಬ್ರಹ್ಮಣ್ಯ ಪರಿಸರದಲ್ಲಿ ಕಾರ್ಯಪಡೆ ಸಮಿತಿ ರಚನೆಗೊಂಡಿದ್ದು ಈ ಸಮಿತಿಯು ಸುಬ್ರಹ್ಮಣ್ಯ ಹಾಗೂ ಸುಳ್ಯದ ಬಾಳಿಲ ಪರಿಸರದಲ್ಲಿ ವಾಸಿಸುವ ಬುಡಕಟ್ಟು ಜನರ ಸಮೀಕ್ಷೆಯನ್ನು ಆರಂಭಗೊಳಿಸಿದೆ.


ಈ ಸಮೀಕ್ಷೆಯಲ್ಲಿ ಬುಡಕಟ್ಟಿನ ಕುಟುಂಬದ ಸದಸ್ಯರಿಗೆ ಆಧಾರ್ ಕಾರ್ಡ್, ಐಡಿ ಕಾರ್ಡ್, ವಿಧವಾ ವೇತನ, ವೃದ್ಯಾಪ್ಯವೇತನ, ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಗಳಿದ್ದಲ್ಲಿ ಇವುಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಬಳಿಕ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಸುಬ್ರಮಣ್ಯ ಪರಿಸರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಫಲಾನುಭವಿಗಳ ಕ್ಯಾಂಪ್ ಆಯೋಜಿಸಲಾಗುತ್ತಿದ್ದು ಆ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಯೋಜನಾ ಪತ್ರಗಳನ್ನು ವಿತರಿಸಲಾಗುತ್ತಿದ್ದು ಫಲಾನುಭವಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.