ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ

0

ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುನ್ನುಗುತ್ತಿದ್ದು ಕುಟುಂಬ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಕೇವಲ ಮನೆಯ ನಾಲ್ಕು ಗೋಡೆ ಕೋಣೆಗೆ ಸೀಮಿತವಾಗಿರದೇ, ಶಿಕ್ಷಣ ಮತ್ತು ಸಮಾಜಮುಖೀ ಕೆಲಸ – ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕಲ್ಪಿಸುವ ಮೂಲಕ ಉಜ್ಜಲ ಭವಿಷ್ಯವನ್ನು ರೂಪಿಸಬೇಕು. ಅಲ್ಲದೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ” ಎಂಬ ಮಾತಿನಂತೆ ಹೆಣ್ಣಿಗೆ ವಿದ್ಯೆ ದೊರೆತಾಗ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ. ಸಂಪಿಗೆ ಹೂವೊಂದು ಅರಳಿದಾಗ ತನ್ನ ಸುತ್ತಲಿನ ಗಾಳಿಯಲ್ಲಿ ಸುಗಂಧವನ್ನು ತುಂಬುವಂತೆ ವಿದ್ಯಾವಂತೆ ಹೆಣ್ಣೊಬ್ಬಳಲ್ಲಿರುವ ವಿದ್ಯೆ, ಅವಳ ಸುತ್ತಲಿನವರಲ್ಲಿ ಗೊತ್ತಿಲ್ಲದೇ ಆವರಿಸಿಕೊಳ್ಳುತ್ತದೆ.

ಇಂದು ಹೆಣ್ಣು ಕೈಯಾಡಿಸದ ಕ್ಷೇತ್ರವೇ ಇಲ್ಲವೆನ್ನಬಹುದು ಅಡುಗೆ ಮನೆಯೊಳಗೆ ಬಂದಿಯಾದ ಮಹಿಳೆ, ಇಂದು ಬಾಹ್ಯಾಕಾಶಕ್ಕೂ ಹಾರಿದ್ದಾಳೆ. ಮನೆಯಿಂದಾಚೆಗೆ ಹೊರಬರಲು ಹೆದರುತ್ತಿದ್ದ ಹೆಣ್ಣು. ಪ್ರಧಾನಮಂತ್ರಿ,
ರಾಷ್ಟ್ರ ಪತಿಗಳಂಥ ಹುದ್ದೆಗಳಲ್ಲಿ ಕುಳಿತು ದೇಶದ ಚುಕ್ಕಾಣಿ ಹಿಡಿದಿದ್ದಾಳೆ. ಯಾವುದೇ ಕ್ಷೇತ್ರವನ್ನು ಹೆಣ್ಣು, ಗಂಡಿಗೆ ಸಮಾನವಾಗಿ ನಿರ್ವಹಿಸಬಲ್ಲಳೆಂದು ಪುಷ್ಟಿಕರಿಸಿದ್ದಾಳೆ ಇವೆಲ್ಲಾ ಸಾಧ್ಯವಾಗಿದ್ದು ಸಂಸ್ಕಾರಯುತ ವಿದ್ಯೆಯಿಂದ ಎನ್ನುವುದು ಸಾಧ್ಯ.

ಸರಕಾರವು ಮಹಿಳೆಯರನ್ನು ಸದೃಢಗೊಳಿಸುವ ಉದ್ದೇಶದಿಂದ ಮಹಿಳಾ ಸಂಘಗಳಾದ ಸ್ತ್ರೀಶಕ್ತಿ ಸಂಘಗಳಿವೆ ಇವು ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದರಿಂದ ಅವರ ಕುಟುಂಬದ ಸ್ಥಿತಿಗತಿ ಬದಲಾವಣೆಯಾಗಿ ಆರ್ಥಿಕವಾಗಿ ಕುಟುಂಬದ ಪೋಷಣೆ ಸುಲಭಗೊಳ್ಳಲು ಸಾಧ್ಯವಾಗಿದೆ ಅಲ್ಲದೆ ಮಹಿಳೆಯರು ಕೇವಲ ಕುಟುಂಬದ ಏಳಿಗೆಗೆ ಸೀಮಿತವಾಗಿರದೆ ಸಮಾಜಮುಖಿಯಾಗಿ ತನ್ನ ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತಿದ್ದಾಳೆ. ಉತ್ತಮ ಸಮಾಜವನ್ನು ಹಾಗೂ ಕುಟುಂಬವನ್ನು ನಿರ್ವಹಣೆ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ಮಹಿಳೆಯರು ಹೊಂದಿದ್ದಾರೆ.
ಹೀಗಾಗಿ ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಮಾತ್ರ ಒಂದು ಕುಟುಂಬ ಹಾಗೂ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿದೆ.

ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

                                  ಕಿಶನ್ ಎಂ
                       ಪವಿತ್ರನಿಲಯ ಪೆರುವಾಜೆ ✍️