ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರ್‌ರಾಷ್ಟ್ರೀಯ ದಿನಾಚರಣೆಯನ್ನು ಮಾ. ೦8 ರಂದು ಸಿ.ಐ.ಸಿ.ಸಿ. (ಕಾಲೇಜು ಆಂತರಿಕ ದೂರು ಸಮಿತಿ) ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.


ಮುಖ್ಯ ಅತಿಥಿಗಳಾಗಿ ಅರಂತೋಡು ನೆಹರು ಮೆಮೋರಿಯಲ್ ಪಿ.ಯು ಕಾಲೇಜುನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ರಮಾ ವೈ.ಕೆ. ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ದಿನವು ನಮ್ಮ ಪಾಲಿನ ವಿಶೇಷ ದಿನ. ಏಕೆಂದರೆ ಇಂದು ನಾವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಆಚರಣೆಯು ತಮ್ಮದೇ ಆದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ವ್ಯಕ್ತಿಗಳಿಗೆ ಮನ್ನಣೆ ನೀಡುವ ದಿನವಾಗಿದೆ. ಹಾಗೆಯೇ ನಮ್ಮ ಅದೇಶದ ಅಭಿವೃದ್ಧಿಗೆ ಮಹಿಳೆಯರು ನೀಡಿದ ಕೊಡುಗೆ ಅಪಾರ. ಮಹಿಳಾ ದಿನವು ಒಂದು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಇದು ವರ್ಷದಿಂದ ವರ್ಷಕ್ಕೆ ಒಂದು ಪದ್ಧತಿಯಾಗುತ್ತಿದೆ. ಇಂದಿನ ಯುವ ಜನತೆ ಮಹಿಳೆಯರ ಗೌರವ ಮತ್ತು ಪ್ರಾಮುಖ್ಯತೆಯನ್ನು ಕುರಿತು ಅರಿವು ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿ ಸರಕಾರದಿಂದ ಹೆಣ್ಣುಮಕ್ಕಳಿಗೆ ಕೊಡಮಾಡುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಹೇಳಿದರು.


ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಹಾಗೂ ಕೆ.ವಿ.ಜಿ.ಸಿ.ಇ. ವಿದ್ಯಾರ್ಥಿನಿಲಯದ ಹಿರಿಯ ಅಧೀಕ್ಷಕಿ ಶ್ರೀಮತಿ ಸುಬ್ಬಮ್ಮರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ನೆಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಮೋಕ್ಷನಾಯಕ್, ಇಂದು ದೇಶದ ಪ್ರಗತಿಯ ಪಥದೆಡೆಗೆ ಸಾಗಲು ಮಹಿಳೆಯರು ಕೂಡಾ ಪುರುಷರಿಗೆ ಸಮಾನವಾಗಿ ಸಾಗಬೇಕಾಗಿದೆ ಇದು ಈ ವರ್ಷದ ಮಹಿಳಾ ದಿನದಂದು ನಮ್ಮೆಲ್ಲರ ಪ್ರತಿಜ್ಞೆಯಾಗಬೇಕು. ಈ ರಾಷ್ಟ್ರದ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ ಖಚಿತಪಡಿಸಿಕೊಳ್ಳಲು ಪ್ರಮುಖ ಹಂತವೆಂದರೆ ನಮ್ಮ ಮನಸ್ಥಿತಿ ಬದಲಿಸಿ ಲಿಂಗ ಸಮಾನತೆಯ ಕಡೆಗೆ ಗಮನ ಹರಿಸೋಣ ಈ ಮೂಲಕ ರಾಷ್ಟ್ರ ಹಾಗೂ ವಿಶ್ವದ ಭವ್ಯ ಭವಿಷ್ಯದ ಕನಸನ್ನು ನನಸಾಗಿಸುವ ಬರವಸೆಯೊಂದಿಗೆ ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸೋಣ ಎಂದು ಶುಭ ಹಾರೈಸಿದರು.


ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಯವರು ಮಾತನಾಡಿ, ಮಹಿಳಾ ದಿನವು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ. ಒಬ್ಬ ಮಹಿಳೆ ಸಕಾರಾತ್ಮಕ ಮನಸ್ಸು ಮತ್ತು ಆಯಾ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಪಣತೊಡುತ್ತಾಳೆ. ಮಹಿಳೆ ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಮತ್ತು ಮಗಳಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಅವಳ ಸಹಭಾಗಿತ್ವ ಅಪೂರ್ವವಾದದ್ದು ಎಂದು ಹೇಳಿ ಮಹಿಳಾ ದಿನಾಚರಣೆಯ ಶುಭಾಶಯಗಳನ್ನಿತ್ತರು.
ಕಾರ್ಯಕ್ರಮಕ್ಕೆ ಯಶಸ್ಸನ್ನು ಹಾರೈಸುತ್ತಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ಮಾತನಾಡಿ, ಸಂಪತ್ತು ವಿದ್ಯೆ ಶಕ್ತಿಯ ದೇವತೆಯಾಗಿ ಪೂಜಿಸಲ್ಪಡುವ ಮಹಿಳೆ ನಮ್ಮ ದೇಶದ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿ ಎಲ್ಲಾ ರಂಗಗಳಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಇದು ಒಂದು ಸಕಾರಾತ್ಮಕ ಬೆಳವಣಿಗೆ ನೆರೆದಿದ್ದ ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞಾ ಎಂ.ಆರ್ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಹಾಗೂ ಸಭಾ ಸದರನ್ನು ಸಿ.ಐ.ಸಿ.ಸಿ. ಅಧ್ಯಕ್ಷರಾದ ಡಾ. ಭಾಗ್ಯ ಹೆಚ್.ಕೆ. ಸ್ವಾಗತಿಸಿ, ಡೀನ್-ರೀಸರ್ಚ್ ಡಾ. ಸವಿತಾ ಸಿ.ಕೆ. ಧನ್ಯವಾದ ಸಮರ್ಪಿಸಿದರು. ಅಂತಿಮ ವರ್ಷದ ಎಂ.ಬಿ.ಎ. ವಿದ್ಯಾರ್ಥಿನಿಯರಾದ ದಿಕ್ಷೀತ ಯಾದವ್ ಕೆ. ಹಾಗೂ ಅಧೀರಾ ಎ.ಆರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅನ್ವಿತಾ ಮತ್ತು ಅನುಷಾ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿಸಿತರಿದ್ದರು.