ನಾಗಪಟ್ಟಣ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ-
ಶ್ರೀ ದೇವರ ನೃತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆಯಾಗಿ ಮಹೋತ್ಸವ ಸಂಪನ್ನ

0

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ವೇದಮೂರ್ತಿ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಮಾ.12 ರಿಂದ 14 ರ ತನಕ ವಿವಿಧ ತಾಂತ್ರಿಕ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.


ಮಾ. 12 ರಂದು ಬೆಳಗ್ಗೆ ಉಷಾಪೂಜೆಯಾಗಿ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಮಧ್ಯಾಹ್ನ ಮಹಾಪೂಜೆಯಾಯಿತು. ಸಂಜೆ ಶ್ರೀ ಶಾಸ್ತಾವೇಶ್ವರ ಭಜನಾ ಸಂಘದ ಸದಸ್ಯರಿಂದ ಭಜನಾ ಸೇವೆ ನಡೆದ ಬಳಿಕ ತಂತ್ರಿಯವರ ಆಗಮನವಾಗಿ ಸಾಮೂಹಿಕ ಪ್ರಾರ್ಥನೆಯಾಗಿ ಪುಣ್ಯಾಹ ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ,ವಾಸ್ತು ಬಲಿ, ವಾಸ್ತು ಕಲಶಾಭಿಷೇಕವಾಗಿ ರಾತ್ರಿ ವಿಶೇಷ ಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.


ಬಳಿಕ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಥಳೀಯ ಬಾಲ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಗಾಯಕಿ ಕು.ಶುಭದಾ ಆರ್. ಪ್ರಕಾಶ್ ರವರಿಂದ ಗಾಯನ ಕಾರ್ಯಕ್ರಮ, ಕು.ಲಾವಣ್ಯ ಯಾದವ್ ಮತ್ತು ಕು.ಹರ್ಷಿತಾ ಯಾದವ್ ರವರಿಂದ ನಾಟ್ಯ ವೈಭವ- ನೃತ್ಯ ರೂಪಕ ಪ್ರದರ್ಶನವಾಯಿತು.


ಮಾ.13 ರಂದು ಪ್ರಾತ:ಕಾಲ ಉಷಾಪೂಜೆಯಾಗಿ ಗಣಪತಿ ಹವನ, ಬಿಂಬ ಶುದ್ಧಿ, ಕಲಶ ಪೂಜೆ,ಕಲಶಾಭಿಷೇಕ,ಸಪರಿವಾರ ದೈವದೇವರುಗಳ ತಂಬಿಲ ಸೇವೆ ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಅಪರಾಹ್ನ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ, ದೀಪಾರಾಧನೆಯಾಗಿ ತಾಯಂಬಕ ರಾತ್ರಿ ಪೂಜೆಯು ನಡೆದು ಶ್ರೀ ದೇವರ ಭೂತ ಬಲಿ, ವಸಂತ ಕಟ್ಟೆ ಪೂಜೆಯಾಗಿ ವಿಶೇಷವಾಗಿ ಶ್ರೀ ದೇವರ ನೃತ್ಯ ಬಲಿ ಉತ್ಸವವು ಜರುಗಿತು. ನಂತರ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.ಮರುದಿನ ಪೂರ್ವಾಹ್ನ ಉಷಾಪೂಜೆಯಾಗಿ ಶ್ರೀ ದೇವರ ಬಲಿ ಉತ್ಸವ ದರ್ಶನ ಬಲಿ ಉತ್ಸವ ನಡೆದು ಬಟ್ಟಲು ಕಾಣಿಕೆಯಾಗಿ ಭಕ್ತಾದಿಗಳಿಗೆ ರಾಜಾಂಗಣ ಪ್ರಸಾದ ವಿತರಣೆಯಾಯಿತು. ಬಳಿಕ ದೇವರಿಗೆ ಮಹಾಪೂಜೆಯಾಗಿ ತಂತ್ರಿಯವರಿಂದ ಮಂತ್ರಾಕ್ಷತೆಯೊಂದಿಗೆ ಮಹೋತ್ಸವವು ಸಂಪನ್ನಗೊಂಡಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಊರಿನ ಮತ್ತು ಪರ ಊರಿನ ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂ ಸೇವಕ ರಾಗಿ ಸಹಕರಿಸಿದರು.