ಮರ್ಕಂಜ ಮತ್ತು ಮಡಪ್ಪಾಡಿಯ ಪೂಂಬಾಡಿ ಭಾಗದ ಅರಣ್ಯದಲ್ಲಿ ಇಂದು ಸಂಜೆ ಕಾಣಿಸಿಕೊಂಡ ಬೆಂಕಿ-ವ್ಯಾಪಿಸಿದ ಹೊಗೆ

0

ಸ್ಥಳಕ್ಕೆ ರಾತ್ರಿಯೇ ದೌಡಾಯಿಸಿ ಬೆಂಕಿ ಹರಡದಂತೆ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು – ಇಲಾಖೆಗೆ ಸಾಥ್ ನೀಡಿದ ಸ್ಥಳೀಯರು

ಮಡಪ್ಪಾಡಿ ಮತ್ತು ಮರ್ಕಂಜದ ಅರಣ್ಯ ಭಾಗದಲ್ಲಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸತತ ಪರಿಶ್ರಮದಿಂದ ಹತೋಟಿಗೆ ಬರುತ್ತಿರುವಾಗಲೇ ಇದೇ ಗ್ರಾಮದ ಮಧ್ಯೆ ಇರುವ ಅರಣ್ಯ ಪ್ರದೇಶದಲ್ಲಿ ಇಂದು ಸಂಜೆಯ ವೇಳೆ ಮತ್ತೆ ಭಾರೀ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿರುವುದು ಮರ್ಕಂಜ ಮತ್ತು ಪೂಂಬಾಡಿ ಪರಿಸರದ ಜನರಿಗೆ ಕಾಣಿಸತೊಡಗಿದೆ.

ಇಂದು ಸಂಜೆ ದಟ್ಟವಾಗಿ ಮಂಜು ಆವರಿಸಿದ ರೀತಿಯಲ್ಲಿ ಹೊಗೆ ಕಾಣಿಸತೊಡಗಿತ್ತು. ಕತ್ತಲು ಆವರಿಸುತ್ತಿದ್ದಂತೆ ಮರ್ಕಂಜದ ಶೆಟ್ಟಿ ಮಜಲು – ಮಿಯ್ಯೋಣಿಗುತ್ತು ಮತ್ತು ಮಡಪ್ಪಾಡಿಯ ಪೂಂಬಾಡಿ ಭಾಗದ ಅರಣ್ಯ ಪ್ರದೇಶದ ಒಂದು ಭಾಗದಲ್ಲಿ ದಟ್ಟ ಬೆಂಕಿ ಕಾಣಿಸಲಾರಂಭಿಸಿದೆ.


ಭಾರೀ ಪ್ರಮಾಣದಲ್ಲಿ ಉರಿಯುವಂತೆ ಗೋಚರಿಸುತ್ತಿದ್ದು, ಬೆಂಕಿಯ ಕಿನ್ನಾಲೆಗೆ ಸ್ಪೋಟದಂತಹ ಶಬ್ದಗಳು ಕೇಳುತ್ತಿರುವುದಾಗಿ ಸ್ಥಳೀಯರಾದ ಪ್ರಶಾಂತ್ ಪೂಂಬಾಡಿಯವರು ಸುದ್ದಿಗೆ ತಿಳಿಸಿದ್ದಾರೆ.


ನಿನ್ನೆಯೂ ಇದೇ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ.‌ ಅದನ್ನು ಅರಣ್ಯ ಇಲಾಖೆಯವರು ನಂದಿಸಿರುವುದಾಗಿ ತಿಳಿದು ಬಂದಿದೆ. ಆದರೆ ಇಂದು ಮತ್ತೆ ಬೇರೆ ಕಡೆಯಿಂದ‌ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ‌ ಹುಟ್ಟಿಸಿದೆ.

ಸ್ಥಳಕ್ಕೆ ರಾತ್ರಿಯೇ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿದ್ದು, ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ನಾಳೆ ಬೆಳಿಗ್ಗೆಯಿಂದ ಬೆಂಕಿ‌ನಂದಿಸುವ ಕಾರ್ಯ ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.