ಮಂಡೆಕೋಲು: ದೇಶಮಲೆ ಕಾಡಿನಲ್ಲಿ ವನದುರ್ಗಾ ದೇವಿ ಸಾನಿಧ್ಯವಿರುವ ಬಗ್ಗೆ ಪ್ರಶ್ನಾ ಚಿಂತನೆಊರವರಿಂದ ಶೋಧನೆ, ಮೃತ್ತಿಕೆ ಸಂಗ್ರಹ

0

ಮಂಡೆಕೋಲು ಗ್ರಾಮದ ಇತಿಹಾಸ ಪ್ರಸಿದ್ಧ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸಮೀಪದ ದೇಶಮಲೆ ಕಾಡಿನಲ್ಲಿ ವನದುರ್ಗಾ ದೇವಿಯ ಸಾನಿಧ್ಯ ಇರುವ ಬಗ್ಗೆ ಸ್ವರ್ಣ ಪ್ರಶ್ನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರ ಊರ ಸಾರ್ವಜನಿಕರು ಜೊತೆಯಾಗಿ ತೆರಳಿ ಶೋಧನೆ ನಡೆಸಿದರು.

ಅದೆಷ್ಟೋ ವರ್ಷಗಳ ಹಿಂದೆ ಈ ಕಾಡ ನಡುವೆ ವನ ದುರ್ಗಾ ದೇವಿ ಸಾನಿಧ್ಯವಿದ್ದು, ಮಂಡೆಕೋಲು ಮಹಾವಿಷ್ಣು ದೇಗುಲಕ್ಕೂ ಸಂಬಂಧವಿದೆ ಎನ್ನಲಾಗಿದೆ. ಅದರಂತೆ ದೇಗುಲದಲ್ಲಿ ದುರ್ಗಾ ಗುಡಿ ನಿರ್ಮಿಸಲಾಗಿದ್ದು, ದೇವಿಯ ವಿಗ್ರಹ ಪ್ರತಿಷ್ಠಾಪನೆ ಆಗಬೇಕೆಂದಿದ್ದರೆ ದೇಶಮಲೆ ಕಾಡಿನ ವನದುರ್ಗಾ ದೇವಿಯ ಸಾನಿಧ್ಯ ಪತ್ತೆಹಚ್ಚುವ ಬಗ್ಗೆ ಪ್ರಶ್ನೆಯಲ್ಲಿ ಕಂಡು ಬಂದಿತ್ತು.

ಅದರಂತೆ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಊರ ಸಾರ್ವಜನಿಕರು ಸೇರಿ ಪೆರ್ದೋಡಿ ಸಮೀಪದ ಕಟ್ಟಕೋಡಿ ಭಾಗದ ದೇಶಮಲೆ ಕಾಡಿನತ್ತ ಸಾಗಿ ದೇವಿ ಸಾನಿಧ್ಯದ ಕುರುಹು ಪತ್ತೆಗಾಗಿ ಶ್ರಮಿಸಿದರು. ಸುಮಾರು 45 ಕ್ಕಿಂತಲೂ ಹೆಚ್ಚಿನ ಜನರು ಈ ಶೋಧ ಕಾರ್ಯದಲ್ಲಿ ಬೆಳಗ್ಗಿನಿಂದಲೇ ತೊಡಗಿಕೊಂಡರು.

ದೇಶಮಲೆ ಕಾಡಿನ ತುತ್ತ ತುದಿಯಲ್ಲಿ ದೇವಸ್ಥಾನದ ಆಗ್ನೇಯ ಭಾಗಕ್ಕೆ ದೇವಿ ಸಾನಿಧ್ಯವಿರುವ ಕೆಲ ಲಕ್ಷಣಗಳು ಕಂಡುಬಂದ ಮೂರು ಸ್ಥಳಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲಿನ ಮೃತ್ತಿಕೆ ಸಂಗ್ರಹಿಸಲಾಗಿದ್ದು ಮುಂದಕ್ಕೆ ದೇವಿ ಸಾನಿಧ್ಯದ ಸ್ಥಳ ಹೌದೋ, ಅಲ್ಲವೋ ಎಂಬುದನ್ನು ಜ್ಯೋತಿಷ್ಯ ಪ್ರಶ್ನಾ ಚಿಂತನೆಯಲ್ಲೇ ಕಂಡುಕೊಳ್ಳಲಾಗುವುದು ಎಂದು ಮಂಡೆಕೋಲು ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ತಿಳಿಸಿದ್ದಾರೆ‌.