ಬಾಳಿಲ: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ‘ಚಿಣ್ಣರ ತಕಧಿಮಿ’ ಮಕ್ಕಳ ಬೇಸಗೆ ಶಿಬಿರದ ಅಂಗವಾಗಿ ಏ. 3ರಂದು ಮೆಟ್ರಿಕ್ ಮೇಳ ಜರುಗಿತು. ಮಕ್ಕಳಿಗೆ ವ್ಯವಹಾರ ಪಾಠ ಕಲಿಯುವಿಕೆಯ ದೃಷ್ಟಿಯಿಂದ ಈ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ತಾವು ಮನೆಯಲ್ಲಿ ಬೆಳೆದ ವಿಧವಿಧದ ತರಕಾರಿ, ತಯಾರಿಸಿದ ವಸ್ತುಗಳು, ಹಣ್ಣು ಹಂಪಲುಗಳು, ಔಷಧೀಯ ಗಿಡಗಳು, ಆಹಾರ ಪದಾರ್ಥಗಳು,ತಂಪು ಪಾನೀಯಗಳು ಇಲ್ಲಿ ಮಾರಾಟಕ್ಕೆ ಲಭ್ಯವಿತ್ತು. ಪೋಷಕರು, ಊರವರು ಗ್ರಾಹಕರು. ಮಧ್ಯಾಹ್ನದ ವೇಳೆಗೆ ಹೆಚ್ಚಿನೆಲ್ಲ ವಸ್ತುಗಳು ಬಿಕರಿಯಾಗಿದ್ದವು. ಮಕ್ಕಳು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ಉದ್ಘಾಟಿಸಿದರು. ಕೋಶಾಧಿಕಾರಿ ರಾಧಾಕೃಷ್ಣ ರಾವ್ ಯು ಸಂದರ್ಭೋಚಿತವಾಗಿ ಮಾತನಾಡಿ, ಶುಭ ಹಾರೈಸಿದರು.

ಸಂಚಾಲಕ ಪಿ.ಜಿ.ಎಸ್.ಎನ್ ಪ್ರಸಾದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಭುವನೇಶ್ವರ ಪಿ, ಮುಖ್ಯ ಗುರುಗಳಾದ ಕೃಷ್ಣಮೂರ್ತಿ, ಶಾಲಾ ವಿದ್ಯಾರ್ಥಿ ನಾಯಕರುಗಳಾದ ನಿತೀಶ್, ಜಾಹ್ನವಿ, ಶಾಲಾ ಅಧ್ಯಾಪಕರು, ಪೋಷಕರು ಉಪಸ್ಥಿತರಿದ್ದರು. ಗೌರವ ಶಿಕ್ಷಕರಾದ ಶಿವಪ್ರಸಾದ ಜಿ. ಮೆಟ್ರಿಕ್ ಮೇಳವನ್ನು ಆಯೋಜಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು. ಒಂದು ವಾರ ಕಾಲ ನಡೆಯುವ ಬೇಸಗೆ ಶಿಬಿರದಲ್ಲಿ ಚಿತ್ರಕಲೆ, ಪೈಂಟಿಂಗ್, ಜನಪದ ಗೀತೆಗಳು, ರಂಗಗೀತೆ, ಕ್ಲೇ ಮಾಡೆಲಿಂಗ್, ಬಬಲ್ ಆರ್ಟ್ ಮುಂತಾದ ವಿಷಯಗಳ ಬಗ್ಗೆ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.