ಸ್ನೇಹ ಶಾಲೆಯಲ್ಲಿ ‘ ಸಾಹಿತ್ಯ ಸಿಂಚನ ‘ ಕಾರ್ಯಕ್ರಮ

0

ಸ್ನೇಹ ಶಾಲೆಯಲ್ಲಿ ‘ಸಾಹಿತ್ಯ ಸಿಂಚನ’ ಕಾರ್ಯಕ್ರಮ ಎ.4 ರಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀರಾಮಕುಂಜೇಶ್ವರ ಕಾಲೇಜು ಕಡಬ ಇಲ್ಲಿನ ಪ್ರಾಂಶುಪಾಲರಾಗಿರುವ ಪ್ರೊ. ಗಣರಾಜ ಕುಂಬಳೆ ಇವರು “ಓದೋಣ ಬಾರಾ” ಕವನ ಸಂಕಲನದ ಬಗ್ಗೆ ಮಾತನಾಡಿ “ನಮಗೆ ಹಿತ ನೀಡುವುದೇ ಸಾಹಿತ್ಯ. ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ. ನಾವು ಮೊದಲು ಹಾಡುವುದನ್ನು ಕಲಿತು ನಂತರ ಬರೆಯುವುದನ್ನು ಕಲಿತರೆ ಅದರಿಂದ ಅರ್ಹತೆ ಬರುತ್ತದೆ. ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಆರಿಸಿಕೊಂಡು ಕವನ ಬರೆಯುತ್ತಾ ಸಾಗಬೇಕು. ಹಾಗೆ ಬರೆದ ಸಾಹಿತ್ಯ ನಮ್ಮ ಜೀವನವನ್ನು ಬದಲಾಯಿಸುವ ಅಂಶವಾಗಿದೆ. ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಈ ಸಂಸ್ಕೃತಿ ಶಿಬಿರದಲ್ಲಿ ಒಳ್ಳೆಯ ಸಂಸ್ಕಾರ ಸಿಗಲಿ. ಮುಂದೆ ನೀವೆಲ್ಲರೂ ಸಂಸ್ಕಾರಯುತ ಪ್ರಜೆಗಳಾಗಿ ಬಾಳಿ” ಎಂದರು.
ಮತ್ತೊರ್ವ ಮುಖ್ಯ ಅತಿಥಿ ದ್ವಾರಕ ಪ್ರತಿಷ್ಠಾನ ಪುತ್ತೂರಿನ ಸದಸ್ಯರಾಗಿರುವ ಶ್ರೀ ಅಮೃತ ಕೃಷ್ಣ ಅವರು ದ್ವಾರಕಾ ಪ್ರತಿಷ್ಠಾನ ನಡೆಸುವ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿದರು. ಬಳಿಕ ಹಿಂದೆ ನಮಗೆ ನಮ್ಮ ಹಿರಿಯರಿಂದ ಸಂಸ್ಕಾರ ದೊರಕುತ್ತಿತ್ತು. ಆದರೆ ಇಂದು ಶಾಲೆಗಳಲ್ಲಿ ಸಂಸ್ಕಾರ ಹೇಳಿಕೊಡುವ ಅಗತ್ಯತೆ ಇದೆ ಎಂದ ಅವರು ದ್ವಾರಕಾ ಪ್ರಕಾಶನದ “ಓದೋಣ ಬಾರಾ” ಕೃತಿಯ ಇಪ್ಪತ್ತು ಪ್ರತಿಗಳನ್ನು ಸ್ನೇಹ ಶಾಲೆಗೆ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸಾಹಿತ್ಯ ರಚನೆಯಲ್ಲಿ ಭಾಷಾ ಶುದ್ಧತೆ ಇರಬೇಕು. ಸಾಹಿತ್ಯವನ್ನು ಯಾರೂ ರಚಿಸಬಹುದು. ನಾವು ಓದುತ್ತಾ ಹೋದಂತೆ ನಮಗೆ ಸ್ಪೂರ್ತಿ ದೊರಕುವುದು. ದ್ವಾರಕ ಸಂಸ್ಥೆ ಮನೆಗಳ ಜೊತೆಗೆ ಮನಗಳನ್ನು ಕಟ್ಟುವ ಕೆಲಸ ಮಾಡುತ್ತದೆ” ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ಯಂ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.