ರಂಜಾನ್ ಉಪವಾಸ ಮತ್ತು ಆರೋಗ್ಯದ ಕಾಳಜಿ : ಡಾ|| ಮುರಲೀ ಮೋಹನ್ ಚೂಂತಾರು

0

ಪ್ರತಿ ವರ್ಷ ಪವಿತ್ರ ಮಾಸವಾದ ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದ ನಮ್ಮ ಸಹೋದರ ಸಹೋದರಿಯರು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಉಪವಾಸ ಮಾಡುತ್ತಾರೆ. ಸೂರ್ಯೋದಯವಾಗುವುದಕ್ಕೆ ಮೊದಲೇ ಆಹಾರ ಸೇವಿಸಿ ಬಳಿಕ 12 ರಿಂದ 14 ಗಂಟೆಗಳ ಕಾಲ ನೀರು ಕೂಡ ಸೇವಿಸದೆ ಸೂಯಾಸ್ತವಾದ ಬಳಿಕವೇ ಆಹಾರ ಸೇವಿಸುತ್ತಾರೆ, ಹಾಗಾಗಿ ಒಂದು ಊಟಕ್ಕೂ ಮತ್ತೊಂದು ಊಟಕ್ಕೂ 12 ರಿಂದ 14 ಗಂಟೆಗಳ ಬಹಳ ಅಂತರವಿರುತ್ತದೆ. ಈ ಸಮಯದ ಅಂತರ ಜಾಸ್ತಿ ಇರುವ ಕಾರಣ ಹಲವು ಜಠರ ಸಂಬಂಧಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ದೀರ್ಘ ಕಾಲದ ಉಪವಾಸದಿಂದಾಗಿ ಜೀರ್ಣ ಕ್ರಿಯೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಮಧುಮೇಹಿ ರೋಗಿಗಳಲ್ಲಿ ಕೂಡ ಬಹಳಷ್ಟು ಜಾಗ್ರತೆಯಿಂದ ಇರಬೇಕಾದ ಅನಿವಾರ್ಯತೆ ಇರುತ್ತದೆ. ಪವಿತ್ರ ರಂಜಾನ್ ತಿಂಗಳು ಮುಸ್ಲಿಂ ಭಾಂದವರಿಗೆ ಬಹಳ ಪ್ರಾಮುಖ್ಯವಾದ ತಿಂಗಳಾಗಿದ್ದು, ಉಪವಾಸ ಮತ್ತು ಪ್ರಾರ್ಥನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ.

ರಂಜಾನ್ ತಿಂಗಳಲ್ಲಿ ಅನುಸರಿಸ ಬೇಕಾದ 5 ಸುವರ್ಣ ನಿಯಮಗಳು

  1. ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ :- ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು, ಉಪವಾಸದ ಸಮಯದಲ್ಲಿ ಅತೀ ಅವಶ್ಯಕ. ಬೇಸಗೆಯಲ್ಲಂತೂ ಇದು ಅತೀ ಪ್ರಾಮುಖ್ಯದ ವಿಚಾರ. ರಾತ್ರಿ ಹೊತ್ತು ಸಿಕ್ಕಾಪಟ್ಟೆ ನೀರು ಸೇವಿಸುವುದು ಒಳ್ಳೆಯದಲ್ಲ. ಅಗತ್ಯಕ್ಕಿಂತ ಜಾಸ್ತಿ ಕುಡಿದಲ್ಲಿ ವಾಂತಿಯಾಗಬಹುದು, ಇಲ್ಲವಾದಲ್ಲಿ ಪದೇ ಪದೇ ಮೂತ್ರ ವಿರ್ಸಜನೆಯಾಗಬಹುದು. ಉಪವಾಸ ಬಿಡುವ ಹೊತ್ತಿನಲ್ಲಿ ಎರಡು ಲೋಟ ನೀರು ಸೇವಿಸಬೇಕು ಮತ್ತು ಗಂಟೆಗೆ ಒಂದು ಗ್ಲಾಸಿನಂತೆ ರಾತ್ರಿ ಮಲಗುವವರೆಗೆ ನಿಧಾನವಾಗಿ ನೀರನ್ನು ಸೇವಿಸಬೇಕು. ನೀವು ಮಲಗುವ ಹೊತ್ತಿಗೆ ಏನಿಲ್ಲವೆಂದರೂ 6 ಗ್ಲಾಸುಗಳಷ್ಟು ನೀರು ಸೇವಿಸಿರಬೇಕು. ಬೆಳಗಿನ ಜಾವ ಉಪವಾಸ ಆರಂಭಿಸುವ ಮೊದಲು, ಮತ್ತೆರಡು ಗ್ಲಾಸು ನೀರು ಸೇವಿಸಿದ್ದಲ್ಲಿ ಹಗಲು ಹೊತ್ತು ನಿರ್ಜಲೀಕರಣವಾಗುವುದನ್ನು ತಡೆಯಬಹುದು. ಹಗಲು ಹೊತ್ತು ಹೆಚ್ಚು ಬಿಸಿಲಿಗೆ ಹೋಗಿ ಬೆವರು ಜಾಸ್ತಿಯಾದಲ್ಲಿ ನೀರಿನಾಂಶ ಕಳೆದು ಹೋಗಿ ನಿರ್ಜಲೀಕರಣವಾಗಬಹುದು. ಜಾಸ್ತಿ ಟೀ ಮತ್ತು ಕಾಫಿ ರಾತ್ರಿ ಹೊತ್ತು ಹೆಚ್ಚು ಸೇವಿಸಬಾರದು. ಹೆಚ್ಚು ಸೇವಿಸಿದಲ್ಲಿ ಮತ್ತಷ್ಟು ನೀರ್ಜಲೀಕರಣವಾಗುವ ಸಾಧ್ಯತೆ ಇದೆ. ಟೀ ಕಾಫಿಯನ್ನು ನಿಮ್ಮ ದ್ರವಾಹಾರದ ಲೆಕ್ಕಕ್ಕೆ ತೆಗೆದುಕೊಳ್ಳಬಾರದು.
  2. ಸಕ್ಕರೆ ಸೇವನೆ ನಿಯಂತ್ರಣದಲ್ಲಿರಲಿ :- ಉಪವಾಸದ ಸಮಯದಲ್ಲಿ ಗ್ಲ್ಲುಕೋಸ್ ಪ್ರಮಾಣ ಕಡಮೆಯಾಗಿ, ಜಾಸ್ತಿ ಸಿಹಿ ಪದಾರ್ಥ ತಿನ್ನಬೇಕೆಂಬ ಆಸೆ ಉಂಟಾಗುತ್ತದೆ. ಉಪವಾಸ ಬಿಡುವ ಸಮಯದಲ್ಲಿ ಅತಿಯಾಗಿ ಜಿಲೆಬಿ, ಜಾಮೂನ್ ಮತ್ತು ಲಡ್ಡು ಮುಂತಾದ ಸಿಹಿ ಪದಾರ್ಥ ತಿಂದಲ್ಲಿ ಗ್ಲುಕೋಸ್ ಪ್ರಮಾಣ ಅತಿಯಾಗಿ ಹೆಚ್ಚಾಗಿ ಮತ್ತಷ್ಟು ಜೀರ್ಣ ಪ್ರಕ್ರಿಯೆಗೆ ತೊಂದರೆಯನ್ನು ನೀಡಬಹುದು. ಸಿಹಿ ಪದಾರ್ಥಗಳು ನಿಮ್ಮ ದೇಹಕ್ಕೆ ಕೇವಲ ಕ್ಯಾಲೋರಿಯನ್ನು ಮಾತ್ರ ನೀಡಬಲ್ಲದು ಮತ್ತು ಇದರಿಂದ ಇನ್ಯಾವುದೇ ಉಪಯೋಗವಿಲ್ಲ. ಉಪವಾಸದ ಸಮಯದಲ್ಲಿ ನಿಮಗೆ ಬೇಕಾಗಿರುವುದು ಪೋಷಕಾಂಶಯುಕ್ತ ಸಮತೋಲನವಾದ ಆಹಾರ. ಸಿಹಿ ತಿಂಡಿಗಳನ್ನು ಸಮತೋಲನದಲ್ಲಿಡುವುದೇ ರಂಜಾನ್ ಉಪವಾಸದ ಅತೀ ಅಗತ್ಯದ ತುರ್ತು ಕ್ರಮವಾಗಿರಬೇಕು. ಕಡಿಮೆ ಸಕ್ಕರೆಯ ಅಂಶವಿರುವ ಸಿಹಿ ಪದಾರ್ಥಗಳಾದ ರಸ್‍ಮಲೈ ಮುಂತಾದ ಆಹಾರಗಳನ್ನು ಸೇವಿಸಬೇಕು, ಹಾಗೆಂದ ಮಾತ್ರಕ್ಕೆ ಸಂಪೂರ್ಣವಾಗಿ ಸಿಹಿ ತಿಂಡಿಗಳನ್ನು ವರ್ಜಿಸಬೇಡಿ. ಜಾಸ್ತಿ ಸಕ್ಕರೆ ಇರುವ ಗುಲಾಬ್ ಜಾಮೂನ್, ಜೀಲೆಬಿ ಬದಲಿಗೆ ಕಡಿಮೆ ಸಕ್ಕರೆ ಮತ್ತು ಹೆಚ್ಚು ಹಾಲಿನಿಂದ ಕೂಡಿದ ರಸ್ ಮಲೈ ಸೇವನೆ ಉತ್ತಮ. ಅತಿಯಾದ ಸಿಹಿ ಇರುವ ಪೆಪ್ಸಿ, ಫ್ಯಾಂಟ, ಕೊಕ್ ಮುಂತಾದ ರಸಾಯನಿಕಯುಕ್ತ ತಂಪು ಪಾನೀಯವನ್ನು ಯಾವಾತ್ತೂ ಸೇವಿಸಬೇಡಿ. ಇಪ್ತಾರ್ ವೇಳೆಯಲ್ಲಿ ಕಡಿಮೆ ಸಕ್ಕರೆ ಇರುವ ನೈಸರ್ಗಿಕ ಪೇಯಗಳಾದ ಕಬ್ಬಿನ ಹಾಲು, ಹಣ್ಣಿನ ರಸ, ಎಳನೀರು ಮುಂತಾದವುಗಳನ್ನು ಹೆಚ್ಚು ಸೇವಿಸಬೇಕು.
  3. ಎಲ್ಲ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು :- ಪರೋಟ, ಪೂರಿ, ಸಮೋಸ, ಪಕೋಡ ಮುಂತಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹಿತಮಿತವಾಗಿ ಸೇವಿಸಬೇಕು. ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಬದಲಾಗಿ ತರಕಾರಿಗಳಿಂದ ಕೂಡಿದ ಎಣ್ಣೆ ರಹಿತ ಚನ್ನ ಮಸಾಲ, ಚಾಟ್ ಮಸಾಲ ಜಾಸ್ತಿ ಸೇವಿಸಿದ್ದಲ್ಲಿ ಉತ್ತಮ. ಎಣ್ಣೆಯಿಂದ ಕರಿದ ಸಮೋಸದ ಬದಲಾಗಿ ಬೇಕ್ ಮಾಡಿದ ಸಮೋಸ ಸೇವಿಸಿ. ಇಪ್ತಾರ್ ಸಮಯದಲ್ಲಿ ಒಂದು ತರಕಾರಿಯ ಆಹಾರ ಮತ್ತು ಇನ್ನೊಂದು ಮಾಂಸಹಾರದ ಸೇವನೆ ಉತ್ತಮ. ಅನ್ನ ಮತ್ತು ಚಪಾತಿಯೊಂದಿಗೆ ಖಾದ್ಯಗಳನ್ನು ಹೆಚ್ಚು ಸೇವಿಸಬೇಕು. ಆದಷ್ಟೂ ಹೆಚ್ಚು ಪೋಷಕಾಂಶವಿರುವ ಪದಾರ್ಥಗಳನ್ನು ಸೇವಿಸಿ. ಅದರಲ್ಲೂ ಸಕ್ಕರೆಯ ಅಂಶ ಕಡಿಮೆಯಿರುವ ಬ್ರೆಡ್, ಬನ್ ಮುಂತಾದ ಪದಾರ್ಥಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಿಮ್ಮ ಬೆಳಗಿನ ಆಹಾರದಲ್ಲಿ ಕೊಬ್ಬಿನಾಂಶ ಕಡಿಮೆಯಿರಬೇಕು ಮತ್ತು ಪ್ರೋಟಿನ್ ಅಂಶ ಜಾಸ್ತಿಯಿದಷ್ಟು ಒಳ್ಳೆದು. ಮೊಟ್ಟೆ, ಮೊಸರು, ಮೊಳಕೆ ಬರಿಸಿದ ಕಾಳುಗಳು, ದಾಲ್ ಮುಂತಾದ ಹೆಚ್ಚು ಪ್ರೋಟಿನ್‍ಯುಕ್ತ ಆಹಾರ ದಿನವಿಡಿ ನಿಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿ ನಿಯಮಿತವಾಗಿ ನಿಧಾನವಾಗಿ ಶಕ್ತಿ ಬಿಡುಗಡೆ ಮಾಡಿ ನಿಮ್ಮನ್ನು ಉಲ್ಲಸಿತವಾಗಿರುವಂತೆ ಮಾಡುತ್ತದೆ. ಅತಿಯಾದ ಕೊಬ್ಬಿನಿಂದ ಕೂಡಿದ ಆಹಾರ ನಿಮ್ಮ ದೇಹಕ್ಕೆ ಯಾವುದೇ ಉಲ್ಲಾಸ ನೀಡದೆ ಅತಿಯಾದ ಆಲಸ್ಯ ಉಂಟಾಗಿ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಬಹುದು.
  4. ನಾರುಯುಕ್ತ ಆಹಾರ ಅತಿ ಉತ್ತಮ :- ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣ ಪ್ರಕ್ರಿಯೆಗೆ ಸಹಕರಿಸಲು ನಾರುಯುಕ್ತ ಆಹಾರಗಳಾದ ಹಸಿ ತರಕಾರಿ, ತಾಜಾ ಹಣ್ಣು ಹಂಪಲುಗಳು, ಅತಿ ಅವಶ್ಯಕ. ಒಣ ದ್ರಾಕ್ಷೆ, ಖರ್ಜೂರ, ಗೋಡಂಬಿ ಮತ್ತಿತ್ತರ ಹಣ್ಣುಗಳನ್ನು ಹಿತಮಿತವಾಗಿ ಸೇವಿಸಿ. ಸಕ್ಕರೆ ಅಂಶ ಕಡಮೆಯಿರುವ ಕಡಿಮೆ ಕ್ಯಾಲೋರಿಯಿಂದ ಕೂಡಿದ ನಾರುಯುಕ್ತ ಹಣ್ಣುಗಳಾದ ಪಪ್ಪಾಯ, ದಾಳಿಂಬೆ, ಕಿತ್ತಳೆ, ಮುಸುಂಬಿ, ಕಲ್ಲಂಗಡಿ ಹಣ್ಣುಗಳ ಆರೋಗ್ಯದ ಹಿತ ದೃಷ್ಟಿಯಿಂದ ಅತೀ ಉತ್ತಮ. ನಿಮ್ಮ ಆಹಾರದಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ (ಶರ್ಕರಪಿಷ್ಟಗಳು)ಅಂಶ ಕಡಮೆಯಿದ್ದು, ಪ್ರೋಟಿನ್ ಮತ್ತು ವಿಟಮಿನ್ ಅಂಶ ಜಾಸ್ತಿಯಿದ್ದಲ್ಲಿ ದೇಹದ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಮಧುಮೇಹ ರೋಗಿಗಳು ಮಾತ್ರ ನಿಮ್ಮ ವೈದ್ಯರನ್ನು ಸಂದರ್ಶಿಸಿ ಅವರ ಸಲಹೆಯಂತೆ ಆಹಾರದ ಮಾರ್ಪಾಡು ಮಾಡಿಕೊಳ್ಳಬೇಕು. ಮಧುಮೇಹ ರೋಗಿಗಳು, ಉಪವಾಸದ ಸಮಯದಲ್ಲಿ ರಕ್ತದಲ್ಲಿನ ಗ್ಲೊಕೋಸ್ ಅಂಶ ದೀಢಿರ್ ಕುಸಿದು ಹೋಗಿ ಪ್ರಜ್ಞೆ ತಪ್ಪುವ ಸಾಧ್ಯತೆಯೂ ಇಲ್ಲದಿಲ್ಲ. ನಿಮ್ಮ ವೈದ್ಯರ ಸಲಹೆಯಂತೆ ಇನ್ಸುಲಿನ್ ಪ್ರಮಾಣ ಮತ್ತು ಔಷಧಿಯ ಪ್ರಮಾಣವನ್ನು ಬದಲಿಸಿಕೊಳ್ಳಲೇ ಬೇಕು. ಉಪವಾಸದ ಸಮಯದಲ್ಲಿ ಸಕ್ಕರೆ ಖಾಯಿಲೆ ಉಳ್ಳವರು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಾಲ ಕಾಲಕ್ಕೆ ಪರೀಕ್ಷಿಸಿಕೊಳ್ಳಬೇಕು. ಗಮನಾರ್ಹ ಏರಿಳಿತ ಕಂಡು ಬಂದಲ್ಲಿ ವೈದ್ಯರ ಸಲಹೆ ಅತಿ ಅಗತ್ಯ.
  5. ಕೊಬ್ಬಿನ ಪದಾರ್ಥಗಳನ್ನು ವರ್ಜಿಸಬೇಕು :- ಹಿತಮಿತವಾದ ಕೊಬ್ಬಿನಾಂಶವಿರುವ ಆಹಾರ, ಸಮತೋಲಿನ ಆಹಾರದ ಒಂದು ಭಾಗವೇ ಆಗಿರುತ್ತದೆ. ಆದರೆ, ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ, ಅತಿಯಾದ ಕೊಬ್ಬಿನಿಂದ ಕೂಡಿದ ಎಣ್ಣೆಯಿಂದ ಕರಿದ ತಿಂಡಿ, ತೀರ್ಥಗಳು ನಿಜವಾಗಿಯೂ ಆರೋಗ್ಯಕ್ಕೆ ಮಾರಕ. ಇದು ಕೇವಲ ಉಪವಾಸದ ಸಮಯದಲ್ಲಿ ಮಾತ್ರವಲ್ಲ, ಜೀವಿತವಾದಿಯ ಪ್ರತಿ ದಿನವೂ ನಾವು ಈ ನಿಯಮವನ್ನು ಪಾಲಿಸಲೇ ಬೇಕು. ಉಪ್ಪು, ಸಕ್ಕರೆಯನ್ನು ಬಿಳಿ ವಿಷ (White Poison) ಎಂದು ಕರೆದರೆ, ಕರಿದ ತಿಂಡಿಗಳನ್ನು (ಸಮೋಸ, ಪಕೋಡ, ಬಜ್ಜಿ, ಬೋಂಡಾ, ಇತ್ಯಾದಿ ಅಧಿಕ ಕೊಬ್ಬು ಲವಣ ಮತ್ತು ಕ್ಯಾಲೋರಿಯಿಂದ ಕೂಡಿದ ಆಹಾರ) ನಿಧಾನ ವಿಷ (Slow Poison) ಎಂದು ಕರೆಯಲಾಗುತ್ತದೆ. ಇವೆರಡನ್ನು ಬಹಳ ಜಾಗರೂಕತೆಯಿಂದ ‘ರುಚಿಗೆ ತಕ್ಕಷ್ಟು ಉಪ್ಪು’ ಮತ್ತು ‘ನಾಲಗೆ ಚಪಲಕ್ಕೆ ತಕ್ಕಷ್ಟು ಸಕ್ಕರೆ’ ಎಂಬಂತೆ ಸೇವಿಸಿದ್ದಲ್ಲಿ, ಆರೋಗ್ಯ ನಿಯಂತ್ರಣದಲ್ಲಿ ಇಡಬಹುದು

ಕೊನೆ ಮಾತು

ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಭಾಂದವರು ನಡೆಸುವ ಉಪವಾಸ ಕೇವಲ ದೇಹ ದಂಡನೆ ಎಂದರೆ ತಪ್ಪಾದೀತು. ಇದಕ್ಕೆ ಮನಸ್ಸು, ದೇಹ ಮತ್ತು ನಂಬಿಕೆಯ ನಡುವೆ ನೇರ ಸಂಬಂಧವಿದೆ. ದೇಹವನ್ನು ಉಪವಾಸದಿಂದ ದಂಡಿಸಿ, ಮನಸ್ಸನ್ನು ಆಸೆ ಆಮಿಷಗಳಿಂದ ನಿಯಂತ್ರಿಸಿ ಹತೋಟಿಗೆ ತಂದು, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುವುದು ಎಂದು ವೈಜ್ಞಾನಿಕವಾಗಿಯೂ ಪ್ರಮಾಣೀಕರಿಸಲಾಗಿದೆ. ನಿಯಮಿತವಾಗಿ ಉಪವಾಸ ಮಾಡುವುದು ಇಸ್ಲಾಂ ಧರ್ಮ ಮಾತ್ರವಲ್ಲದೆ ಇನ್ನಿತರ ಧರ್ಮಗಳಲ್ಲಿಯೂ ಆಚರಣೆಯಲ್ಲಿದೆ. ಹೀಗೆ ಉಪವಾಸ ಮಾಡಿದಾಗ ದೇಹದಲ್ಲಿ ಅತಿಯಾಗಿ ಶೇಕರಣೆಗೊಂಡ ಕೊಬ್ಬು ಕರಗಿ, ಗ್ಲುಕೋಸ್ ಆಗಿ ಯಕೃತಿನಲ್ಲಿ ಪರಿವರ್ತನೆಗೊಳ್ಳುತ್ತದೆ. ಹೀಗೆ ರಕ್ತಕ್ಕೆ ಬಿಡುಗಡೆಯಾದ ಗ್ಲುಕೋಸ್‍ನಿಂದ ದೇಹದ ಜೀವಕೋಶಗಳಿಗೆ ಬೇಕಾದ ಶಕ್ತಿ ಬಿಡುಗಡೆಯಾಗಿ ದೇಹದ ಜೈವಿಕ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುತ್ತದೆ. ಒಟ್ಟಿನಲ್ಲಿ ದೇಹ, ಮನಸ್ಸನ್ನು ಹತೋಟಿಗೆ ತಂದು ಮಾನಸಿಕ ಮತ್ತು ದೈಹಿಕ ಆರೋಗ್ಯಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದೇ ನಿಯಮಿತವಾಗಿ ಉಪವಾಸ ಮಾಡುವುದರ ಮೂಲ ಉದ್ದೇಶವಾಗಿದೆ. ನಂಬಿಕೆಯ ತಳಹದಿಯ ಮೇಲೆ ನಡೆಯುವ ಪವಿತ್ರ ಕಾರ್ಯಗಳಿಗೆ ದೇಹ ಪೂರಕವಾಗಿ ಸ್ಪಂದಿಸಿ ದೇಹದ ಆರೋಗ್ಯವನ್ನು ಹದೆಗೆಡದಂತೆ ನೋಡಿಕೊಳ್ಳುತ್ತದೆ. ಅದೆನೇ ಇರಲಿ ಜಾತಿ ಮತ ಧರ್ಮಗಳನ್ನು ಮೀರಿ ನಂಬಿಕೆಯ ತಳಹದಿಯ ಮೇಲೆ ನಡೆಯುವ ಉಪವಾಸ ಪ್ರಕ್ರಿಯೆ ಖಂಡಿತವಾಗಿಯೂ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಬಲ್ಲದು ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುವ ‘ಮಾನವೀಯ’ ದೃಷ್ಟಿಯಿಂದ ನಡೆಯುವ ಎಲ್ಲಾ ಆಚರಣೆಗಳು ಮನುಕುಲದ ಒಳಿತಿಗೆ ಖಂಡಿತವಾಗಿಯೂ ಸಹಕಾರಿಯಾದೀತು ಮತ್ತು ಅದರಲ್ಲಿಯೆ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ