ಮೋದಿ ಯೋಜನೆ ಎಂದು ಹೆಸರು ಹೇಳಿ ಹಣದೋಚುವ ಹುನ್ನಾರ

0

ಹಳೆಗೇಟಿನಲ್ಲಿ ವಂಚನೆಯಿಂದ ಪಾರಾದ ವೃದ್ಧ ಮಹಿಳೆ

ಕಳೆದ ಕೆಲವು ದಿನಗಳ ಹಿಂದೆ ಅಡೂರು ಭಾಗದಲ್ಲಿ ಒಬ್ಬ ವೃದ್ದ ವ್ಯಕ್ತಿಯ ಬಳಿಗೆ ಬಂದಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮೋದಿಯವರ ಯೋಜನೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಬಂದಿರುವಂತಹ ಒಂದೂವರೆ ಲಕ್ಷ ರೂಪಾಯಿಯ ಯೋಜನೆಯೊಂದು ತನ್ನ ಬಳಿಯಿದ್ದು ಅದನ್ನು ತಮಗೆ ಪಡೆಯಲು ಆಧಾರ್ ಜೆರಾಕ್ಸ್ ಮತ್ತು 5 ಸಾವಿರ ರೂಪಾಯಿ ಬೇಕಾಗಿದ್ದು ತಾವು ಅದನ್ನು ನೀಡಿದರೆ ನಾಳೆನೇ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಒಂದೂವರೆ ಲಕ್ಷ ರೂಪಾಯಿ ಬರುತ್ತದೆ ಎಂದು ನಂಬಿಸಿ ಹಣ ಪಡೆದು ಪರಾರಿಯಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಘಟನೆಯಲ್ಲಿ ಮೋಸ ಹೋಗಿದ್ದ ವ್ಯಕ್ತಿಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇದೀಗ ಅದೇ ರೀತಿಯ ಘಟನೆಯೊಂದು ಸುಳ್ಯದ ಹಳೆಗೇಟಿನಲ್ಲಿ ನಡೆದಿದ್ದು ಅಲ್ಪದರಲ್ಲಿ ವೃದ್ದ ಮಹಿಳೆಯೋರ್ವರು ಪಾರಾದ ಘಟನೆ ವರದಿಯಾಗಿದೆ.

ಹಳೆಗೇಟು ನಿವಾಸಿ ವೃದ್ಧ ಮಹಿಳೆಯೋರ್ವರು (75 ವರ್ಷ)ಏಪ್ರಿಲ್ 15ರಂದು ಬೆಳಿಗ್ಗೆ 8:30 ಕ್ಕೆ ತಮ್ಮ ಅಂಗಡಿಯಲ್ಲಿ ಕುಳಿತಿದ್ದಾಗ ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಟೀ ಇದೆಯೇ ಎಂದು ಕೇಳಿದ್ದಾನೆ.

ಬಳಿಕ ನಾನು ಚಂದ್ರಶೇಖರ್ ರವರ ಮಗನಾಗಿದ್ದು ನಾನು ಕೆನರಾ ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡುತ್ತಿದ್ದೇನೆ.


ನಮ್ಮ ಬ್ಯಾಂಕಿಗೆ ಕೋವಿಡ್ ಸಂದರ್ಭದಲ್ಲಿ ವೃದ್ಧರಿಗೆ ಎಂದೇ ಮೋದಿಯವರ ಯೋಜನೆಯಲ್ಲಿ 1,25000 ರೂಗಳ ಸ್ಕೀಮ್ ಬಂದಿದ್ದು, ಅದರಲ್ಲಿ ಇದೀಗ ಒಂದು ಮಾತ್ರ ಬಾಕಿ ಇದ್ದು ಅದನ್ನು ನಾವು ನಿಮಗೆ ನೀಡಲು ತೀರ್ಮಾನಿಸಿದ್ದೇವೆ.ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಜೆರಾಕ್ಸ್ ಕೊಡಬೇಕು ಎಂದು ಹೇಳಿದರು ಎನ್ನಲಾಗಿದೆ.
ಈ ವೇಳೆ ವೃದ್ದೆ ಆಧಾರ್ ಜೆರಾಕ್ಸ್ ಇದೆ ಎಂದಾಗ ಆತ ಅದರೊಂದಿಗೆ 7 ಸಾವಿರ ರೂಪಾಯಿ ಬ್ಯಾಂಕ್ ಮ್ಯಾನೇಜರಿಗೆ ನೀಡಬೇಕಾಗಿದ್ದು ನನ್ನ ಬಳಿ 4 ಸಾವಿರ ರೂಪಾಯಿ ಇದೆ ನೀವು ಮೂರು ಸಾವಿರ ರೂಪಾಯಿ ನೀಡಬೇಕು.ನಾನು ಅದನ್ನು ಬ್ಯಾಂಕಿಗೆ ಪಾವತಿಸಿ ಯೋಜನೆಯ ಹಣ ನಿಮಗೆ ಬರುವ ಹಾಗೆ ಮಾಡುತ್ತೇನೆ ಎಂದು ಹೇಳಿದ್ದಾನೆ.


ಈ ವೇಳೆ ವೃದ್ದೆಗೆ ತಾನು ದುಡ್ಡು ಕೊಟ್ಟರೆ ಮೋಸ ಹೋಗುವ ವಿಷಯ ತಿಳಿದು ನನ್ನ ಬಳಿ ದುಡ್ಡು ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸ್ವಲ್ಪ ಹೊತ್ತು ನಿತ್ತು ನೀವು ಟೀ ರೆಡಿ ಮಾಡಿ ನಾನು ಈಗ ಬರುತ್ತೇನೆ ಎಂದು ಹೇಳಿ ಹೋದವನು ಮತ್ತೆ ಬರಲಿಲ್ಲ.
ಕೂಡಲೇ ವೃದ್ದೆ ತಮಗೆ ಪರಿಚಯವಿರುವ ಪೊಲೀಸರಿಗೆ ಮಾಹಿತಿ ನೀಡಿದ್ದು ಸುಳ್ಯ ಪೊಲೀಸ್ ಠಾಣೆಯಿಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಬಂದಿರುತ್ತಾರೆ ಎಂದು ತಿಳಿದು ಬಂದಿದೆ.