ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೊಂದು‌ ಮನವಿ

0

-ಮನೋಜ್ ಪಾನತ್ತಿಲ ಬರೆಯುತ್ತಾರೆ‌ ಹೀಗೆ..

ಸುಳ್ಯದ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆಗಳ ಸುಧಾರಣೆ ಅತೀ ಅವಶ್ಯಕ. ಅದರಲ್ಲೂ ಮುಖ್ಯವಾಗಿ ಸುಳ್ಯ ನಗರದ ಹೃದಯಭಾಗವನ್ನು ಸಂಪರ್ಕಿಸುವ ಸುಳ್ಯ- ಕೋಡಿಯಾಲಬೈಲ್ – ದುಗ್ಗಲಡ್ಕ ರಸ್ತೆಯು ಸುಸಜ್ಜಿತವಾಗಿ ಅಭಿವೃದ್ಧಿಗೊಂಡಲ್ಲಿ ನಗರದ ಚಿತ್ರಣವೇ ಬದಲಾಗುವುದು ನಿಶ್ಚಿತ. ಈ ರಸ್ತೆಗೆ ಹೊಂದಿಕೊಂಡು ಈಗಾಗಲೇ ಸರಕಾರಿ ಪ್ರಥಮದರ್ಜೆ ಕಾಲೇಜು, ಸಮುದಾಯಭವನ, ವಿದ್ಯಾರ್ಥಿ ನಿಲಯಗಳಿದ್ದು, ಈ ರಸ್ತೆ ಅಭಿವೃದ್ಧಿಗೊಂಡಲ್ಲಿ ಇನ್ನಷ್ಟು ವಾಣಿಜ್ಯ ಚಟುವಟಿಕೆಗಳು, ಸರಕಾರಿ ಇಲಾಖೆಗಳು ಈ ಭಾಗದಲ್ಲಿ ಆರಂಭಗೊಳ್ಳುವುದರಲ್ಲಿ ಸಂಶಯವಿಲ್ಲ. ಸುಬ್ರಹ್ಮಣ್ಯ, ಕೊಲ್ಲಮೊಗ್ರ, ಗುತ್ತಿಗಾರು ಭಾಗದಿಂದ ತಾಲೂಕು ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಸುಮಾರು 5 ಕೀ.ಮೀ. ಹತ್ತಿರ ಮತ್ತು ನೇರ ಸಂಪರ್ಕ ಕಲ್ಪಿಸುವ ಈ ರಸ್ತೆ ತಾಲೂಕಿನಲ್ಲೇ ಅತ್ಯಂತ ನಿರ್ಲಕ್ಷ್ಯಕ್ಕೊಳಪಟ್ಟ ಅತೀ ಪ್ರಮುಖ ರಸ್ತೆ. ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಈ ರಸ್ತೆಯನ್ನು ಅವಲಂಬಿಸಿದ್ದರೂ ಇಲ್ಲಿ ಒಂದೇ ಒಂದು ಸರಕಾರಿ ಬಸ್ಸಿನ ಸೌಲಭ್ಯ ಇಲ್ಲದಿರುವುದು ಈ ರಸ್ತೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಇದಲ್ಲದೆ ಚುನಾವಣೆ ಸಂದರ್ಭ ತಾಲೂಕಿಗೆ ಬರುವ ರಾಷ್ಟ್ರಮಟ್ಟದ ಗಣ್ಯವ್ಯಕ್ತಿಗಳು ಕೂಡಾ ಬಂದಿಳಿಯುವುದು ಇದೆ ರಸ್ತೆಗೆ ಹೊಂದಿಕೊಂಡಿರುವ ಹೆಲಿಪ್ಯಾಡ್ ನಲ್ಲಿ. ಇಷ್ಟೊಂದು ಪ್ರಾಮುಖ್ಯತೆ ಇರುವ ಈ ರಸ್ತೆಯ ಅಭಿವೃದ್ಧಿಗೆ ಈ ಭಾಗದ ನಾಗರೀಕರು ಸುಮಾರು 25 ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಇನ್ನಾದರೂ ಈ ರಸ್ತೆಯ ಬಗ್ಗೆ ಮಲತಾಯಿ ಧೋರಣೆಯನ್ನು ಕೈಬಿಟ್ಟು ನೂತನವಾಗಿ ಆಯ್ಕೆಯಾಗುವ ಶಾಸಕರು ಸುಳ್ಯ ನಗರದ ಅಭಿವೃದ್ಧಿಯ ದೃಷ್ಠಿಯಿಂದ, ಸಾರ್ವಜನಿಕರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ರಸ್ತೆಯ ಪ್ರಾಮುಖ್ಯತೆಯನ್ನು ಮನಗಂಡು ಸುಳ್ಯದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬಹುದಾದ, ನಗರದ ಹೃದಯಭಾಗವನ್ನು ಸಂಪರ್ಕಿಸುವ ಸುಸಜ್ಜಿತ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ, ಈನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಎಂಬುದೇ ನಮ್ಮ ಆಶಯ.

ಮನೋಜ್‌ ಪಾನತ್ತಿಲ ಉಬರಡ್ಕ.