ಆಮೆ ಗತಿಯಿಂದ ಸಾಗುತ್ತಿರುವ ಶಾಂತಿನಗರ ಕ್ರೀಡಾಂಗಣದ ಕಾಮಗಾರಿ

0

ಒಂದು ವರ್ಷ ಪೂರೈಸಿದ ಕ್ರೀಡಾಂಗಣದ ಮಣ್ಣಿನ ಕೆಲಸ

ಸುಳ್ಯದ ಜನತೆಯ ಬಹುದೊಡ್ಡ ಕನಸಿನಲ್ಲಿ ಒಂದಾಗಿರುವ ಶಾಂತಿನಗರ ಕ್ರೀಡಾಂಗಣದ ಕಾಮಗಾರಿ ಆಮೆ ಗತಿಯಿಂದ ಸಾಗುತ್ತಿದ್ದು ಕಳೆದ ಒಂದು ವರ್ಷದಲ್ಲಿ ಕೇವಲ ಮಣ್ಣು ಅಗೆದು ಹಾಕುವ ಕೆಲಸ ಕಾರ್ಯ ಮಾತ್ರ ನಡೆದಂತೆ ಕಾಣಿಸುತ್ತಿದೆ.

ಕ್ರೀಡಾಂಗಣದ ಕಾಮಗಾರಿಗೆ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ವೇಗವನ್ನು ನೀಡಲಾಗಿತ್ತು. ಅದರಂತೆ ಕ್ರೀಡಾಂಗಣದ ಒಂದು ಬದಿಯ ಮಣ್ಣನ್ನು ಅಗೆದು ತಂದು ಮತ್ತೊಂದು ಬದಿಯಲ್ಲಿ ಹಾಕಲಾಯಿತು. ಇದು ಸುಮಾರು 100 ಅಡಿಗಳಿಗೂ ಹೆಚ್ಚು ಬೃಹತಾಕಾರದಲ್ಲಿ ತುಂಬಿ ಇದೇ ಸಂದರ್ಭದಲ್ಲಿ ಮಳೆಗಾಲ ಆರಂಭವಾಗಿ ಮಣ್ಣು ಕುಸಿದು ಬೀಳಲು ಆರಂಭಿಸಿದವು. ಈ ಸಂದರ್ಭದಲ್ಲಿ ಸ್ಥಳೀಯ ಜನತೆ ಭಯಭೀತರಾಗಿ ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆಯವರಲ್ಲಿ ಜನ ಪ್ರತಿನಿಧಿಗಳಲ್ಲಿ ಬೇಡಿಕೆ ಇಟ್ಟರು. ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡವು. ಪರ ವಿರೋಧ ಚರ್ಚೆಗಳು ನಡೆದವು.
ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡ ಬಳಿಕ ಅಂದಿನ ಶಾಸಕರಾದ ಅಂಗಾರರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಆದೇಶವನ್ನು ನೀಡಿ ಮಣ್ಣು ಕುಸಿಯುತ್ತಿದ್ದ ಜಾಗಕ್ಕೆ ಟಾರ್ಪಲ್ ಹೊದಿಸಿ ಮಣ್ಣು ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿತ್ತು. ಬಳಿಕ ಮಳೆಗಾಲ ನಿಂತ ನಂತರ ಶಾಶ್ವತವಾಗಿ ತಡೆಗೋಡೆಯನ್ನು ನಿರ್ಮಿಸುವ ಭರವಸೆಯನ್ನು ಸ್ಥಳೀಯರಿಗೆ ನೀಡಲಾಗಿತ್ತು.

ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಅಂದು ಕಾಮಗಾರಿಯನ್ನು ನಿಲ್ಲಿಸಿ ಬಳಿಕ ಇದೀಗ ಮಾರ್ಚ್ ತಿಂಗಳಿನ ಕೊನೆಯಲ್ಲಿ ಮತ್ತೆ ಕಾಮಗಾರಿ ಆರಂಭಗೊಂಡಿದ್ದು ಎರಡು ಜೆಸಿಬಿ ಮೂಲಕ ಮಣ್ಣು ಅಗೆಯುವ ಕೆಲಸ ಮತ್ತೆ ಆರಂಭಗೊಂಡಿರುತ್ತದೆ. ಮತ್ತೆ ಮಳೆಗಾಲ ಆರಂಭವಾಗುವ ದಿನಗಳು ಸಮೀಪಿಸುತ್ತಿದ್ದು ಕಾಮಗಾರಿ ಯಾವ ಹಂತಕ್ಕೆ ತಲುಪಬಹುದು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಆದರೆ ಒಂದು ವಿಷಯದಲ್ಲಿ ಸ್ಥಳೀಯ ಜನತೆ ಅಲ್ಪನಿಟ್ಟಿಸಿರು ಬಿಟ್ಟಿರುತ್ತಾರೆ. ಕಾರಣ ಕಳೆದ ವರ್ಷ ಈ ಭಾಗದಲ್ಲಿ ಕಂಡು ಬಂದಿದ್ದ ಮಣ್ಣಿನ ದಿಬ್ಬವನ್ನು ಜೆಸಿಬಿ ಮೂಲಕ ಸ್ಟೆಪ್ ರೀತಿಯಲ್ಲಿ ಮಾಡುವ ಮೂಲಕ ಮಣ್ಣು ಜರಿಯದಂತೆ ಕೆಲಸವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಅಲ್ಲದೆ ಮಳೆಗಾಲದಲ್ಲಿ ಈ ಭಾಗದಲ್ಲಿ ಅರಿಯುವ ನೀರು ಸುರಕ್ಷಿತವಾಗಿ ಅರಿಯಲು ಬೃಹತ್ ಪೈಪುಗಳನ್ನು ಅಳವಡಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಬೃಹತ್ ಪೈಪುಗಳನ್ನು ಸ್ಥಳದಲ್ಲಿ ತಂದು ಹಾಕಿರುವುದು ಕಂಡು ಬರುತ್ತಿದೆ.

ಕಳೆದ ವರ್ಷ ಈ ಕ್ರೀಡಾಂಗಣದ ಕಾಮಗಾರಿಯ ಕುರಿತು ರಾಜಕೀಯವಾಗಿ ಪರ ವಿರೋಧ ಚರ್ಚೆಗಳು ನಡೆದವು. ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ನೀಡಿ ಕಾಮಗಾರಿಯ ಲೋಪ ದೋಷಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿದ್ದರು. ಇದರ ಬಗ್ಗೆ ಪತ್ರಿಕಾಗೋಷ್ಠಿಯನ್ನು ಕೂಡ ಕರೆದು ಕಾಮಗಾರಿಯ ಅವೈಜ್ಞಾನಿಕ ಸ್ಥಿತಿಯ ಬಗ್ಗೆ ಆರೋಪಿಸಿದ್ದರು.ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷದ ಸುಳ್ಳದ ಮುಖಂಡರುಗಳು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಎಷ್ಟು ಕಾಳಜಿ ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಒಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡು ಇದರ ಪ್ರಯೋಜನ ಸುಳ್ಯದ ಕ್ರೀಡಾಪಟುಗಳಿಗೆ ಲಭಿಸಲಿ, ವರ್ಷಗಳಿಂದ ಕಾಯುತ್ತಿರುವ ಈ ಒಂದು ಯೋಜನೆಯು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸುಳ್ಯದ ಜನತೆ ಕಾಯುತ್ತಿದ್ದಾರೆ.