ಮರ್ಕಂಜದ ಮಿತ್ತಡ್ಕ ಶಾಲಾ ಎಸ್ ಡಿಎಂಸಿ ವಿವಾದಕ್ಕೆ ಅಂತ್ಯ ಹಾಡಿದ ಶಿಕ್ಷಣಾಧಿಕಾರಿಗಳು

0

ಎಸ್ ಡಿಎಂಸಿ ಪುನರ್ ರಚನೆಗೆ ಸೂಚನೆ

ಮರ್ಕಂಜದ ಮಿತ್ತಡ್ಕ ಶಾಲಾ ಎಸ್ ಡಿಎಂಸಿಯ ವಿವಾದವನ್ನು ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ತೆರಳಿ ಸಭೆ ನಡೆಸಿ ಇತ್ಯರ್ಥಪಡಿಸಿದ ಘಟನೆ ಇಂದು ವರದಿಯಾಗಿದೆ.

ಮಿತ್ತಡ್ಕ ಶಾಲೆಯ ಎಸ್ ಡಿಎಂಸಿ ವಿವಾದದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ.ರವರು ಇಂದು ಮಧ್ಯಾಹ್ನ 2 ಗಂಟೆಗೆ ಮಿತ್ತಡ್ಕ ಶಾಲೆಗೆ ತೆರಳಿ ಮೊದಲು ಎಸ್ ಡಿಎಂಸಿಯವರೊಂದಿಗೆ ಸಭೆ ನಡೆಸಿ ಚರ್ಚಿಸಿದರೆನ್ನಲಾಗಿದೆ. ಬಳಿಕ ಹಳೆ ವಿದ್ಯಾರ್ಥಿಗಳು, ಪೋಷಕರು, ಪಂಚಾಯತ್ ನವರಿದ್ದು ಸಭೆ ನಡೆಸಿದರು.
ಸಭೆಯಲ್ಲಿ ಈಗಿನ ಎಸ್ ಡಿಎಂಸಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಜೂ.3ರೊಳಗೆ ರಾಜೀನಾಮೆ ನೀಡಿ, ಗ್ರಾಮ ಪಂಚಾಯತ್ ನಲ್ಲಿ ಅಂಗೀಕಾರ ಆದ ಮೇಲೆ, ಜೂ.8ರಂದು ಪೋಷಕರ ಸಭೆ ನಡೆಸಿ ಎಸ್ ಡಿಎಂಸಿಯನ್ನು ಪುನರ್ ರಚಿಸಬೇಕೆಂದು ಸೂಚಿಸಿದರೆನ್ನಲಾಗಿದೆ. ಮುಖ್ಯೋಪಾಧ್ಯಾಯರ ವರ್ಗಾವಣೆಯ ಬಗ್ಗೆಯೂ ಸಭೆಯಿಂದ ಅಭಿಪ್ರಾಯ ಪಡೆದರೆಂದು ತಿಳಿದು ಬಂದಿದೆ.

ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷೆ ಸಂಧ್ಯಾ ದೋಳ, ಉಪಾಧ್ಯಕ್ಷ ಕೇಶವ ಹೊಸೊಳಿಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಅಡ್ಕಬಳೆ, ಮಾಜಿ ಅಧ್ಯಕ್ಷ ದಾಮೋದರ ಪಾಟಾಳಿ ಮಿತ್ತಡ್ಕ, ಸುಳ್ಯ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಸೇರಿದಂತೆ ಬಿರ್ ಸಿ, ಸಿಆರ್ ಪಿಯವರು, ಎಸ್ ಡಿಎಂಸಿ ಸದಸ್ಯರು, ಗ್ರಾ.ಪಂ.ಸದಸ್ಯರು, ಪೋಷಕರು ಉಪಸ್ಥಿತರಿದ್ದರು.