ಪೆರಾಜೆಯಲ್ಲಿ ಭಾ.ಜ.ಪ ಕಾರ್ಯಕರ್ತರಿಗೆ ಕೃತಜ್ಞತೆ ಮತ್ತು ಕೆ. ಜಿ. ಬೋಪಯ್ಯರಿಗೆ ಅಭಿನಂದನಾ ಕಾರ್ಯಕ್ರಮ

0

ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆಯನ್ನು ಮತದಾರರು ಮರೆತಿದ್ದಾರೆ; ಕೆ‌.ಜಿ.ಬೋಪಯ್ಯ

ಕಾರ್ಯಕರ್ತರು ಜಾಗೃತರಾಗಿರಬೇಕು; ನಾಗೇಶ ಕುಂದಲ್ಪಾಡಿ

ರಾಜ್ಯ ಬಿಜೆಪಿ ಸರಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆಯನ್ನು ಮತದಾರರು ಮರೆತಿರುವುದರಿಂದ ಈ ಚುನಾವಣೆಯಲ್ಲಿ ಅನಿರೀಕ್ಷಿತವಾದ ಸೋಲಾಗಿದೆ ಎಂದು ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಅವರು ಇಂದು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿಯ ಪೆರಾಜೆ ಶಕ್ತಿ ಕೇಂದ್ರದ ವತಿಯಿಂದ ಭಾಜಪ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆ ಮತ್ತು ಕೆ.ಜಿ. ಬೋಪಯ್ಯರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ರಾಜ್ಯದಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತೇವೆ ಎಂಬ ನಿರೀಕ್ಷೆ ಇತ್ತು.ನಮಗೆ ಅತಿ ವಿಶ್ವಾಸವೇ ಮುಳುವಾಯಿತು.ಆದರೆ ಪೆರಾಜೆಯಲ್ಲಿ ನಿರೀಕ್ಷಿತ ಮತಗಳನ್ನು ಈ ಬಾರಿಯೂ ಪಡೆದಿದ್ದೇವೆ . ಆಡಳಿತ ವಿರೋಧಿಅಲೆ ,ಪ್ರಣಾಳಿಕೆಯಲ್ಲಿನ ಲೋಪ, ಅಂತಿಮ ಹಂತದಲ್ಲಿ ಅಭ್ಯರ್ಥಿಯ ಆಯ್ಕೆ ,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನ ಆಮಿಷ ,ಜಾತಿ ರಾಜಕೀಯ ದಿಂದಾಗಿ ಸೋಲುಂಟಾಯಿತು ಎಂದ ಅವರು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.ಚುನಾವಣೆಯಲ್ಲಿ ಸೋತರು ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಅವರು ಹೇಳಿದರು.


ವೇದಿಕೆ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ನಮ್ಮಪಕ್ಷದ ಕಾರ್ಯಕರ್ತರು ಜಾಗೃತರಾಗಿರಬೇಕು. ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವುದರ ಮೂಲಕ ಮಾತೆ ಬಂಡವಾಳವನ್ನಾಗಿಸಿ ಕೊಂಡು ಕೆಲಸ ಮಾಡಬೇಕು ಎಂದ ಅವರು ರಾಜ್ಯ ಸರ್ಕಾರ ವಿರುದ್ಧದ ಭ್ರಷ್ಟಾಚಾರ,40%ಕಮಿಷನ್ ಮೊದಲಾದ ವಿಪಕ್ಷಗಳ ಆರೋಪಗಳಿಗೆ ಸಮರ್ಥವಾದ ಉತ್ತರ ಕೊಡುವ ನಾಯಕತ್ವ ದ ಕೊರತೆ ಎದುರಾಯಿತು.ನಮ್ಮ ಎಂ.ಪಿ.ಯವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದಿರುವುದು ಕೂಡ ಹಿನ್ನಡೆಯ ಭಾಗವಾಗಿದೆ. ಮುಂದೆ ಬರುವ ಪೆರಾಜೆ ಸಹಕಾರಿ, ಜಿ.ಪಂ.,ತಾ.ಪಂ.ಚುನಾವಣೆಯಲ್ಲಿ ನಮ್ಮ ಪಕ್ಷ ಜಯಭೇರಿ ಭಾರಿಸಬೇಕು.ರಾಜ್ಯಬಿಜೆಪಿಯಲ್ಲಿ ಕೆ.ಜಿ.ಬೋಪಯ್ಯರಿಗೆ ಉತ್ತಮ ಹುದ್ದೆ ದೊರೆಯುವಂತಾಗಬೇಕು ಎಂದು ಅವರು ಹೇಳಿದರು.


ಸ್ಥಳೀಯ ಮುಖಂಡರಾದ ಸೀತಾರಾಮ ಪೆರಾಜೆ, ಸುಭಾಶ್ಚಂದ್ರ ಬಂಗಾರ ಕೋಡಿ, ಉದಯಚಂದ್ರ ಕುಂಬಳಚೇರಿ, ಎ.ಸಿ .ಹೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ ಬಾಲಚಂದ್ರ ,ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಧನಂಜಯ ಕೋಡಿ ಉಪಸ್ಥಿತರಿದ್ದರು. ಪೆರಾಜೆ ಶಕ್ತಿ ಕೇಂದ್ರದ ಸಂಚಾಲಕ ,ಗ್ರಾಪಂ ಸದಸ್ಯ ನಂಜಪ್ಪ ನಿಡ್ಯಮಲೆ ಸ್ವಾಗತಿಸಿ, ಮಡಿಕೇರಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ವಂದಿಸಿದರು.