ಮರ್ಕಂಜದ ಅಳವುಪಾರೆ‌ ಗಣಿಗಾರಿಕೆ ಸ್ಥಗಿತ

0

ಸ್ಥಳೀಯರ ಭಾರೀ ವಿರೋಧ, ಪ್ರತಿಭಟನೆಗಳ ಬಿಸಿಗೂ ಬಗ್ಗದೇ ಆರಂಭಗೊಂಡ ಮರ್ಕಂಜದ ಅಳವುಪಾರೆ ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಂದ‌ ಸೂಚನೆ ಬಂದಿರುವುದಾಗಿ ತಿಳಿದು ಬಂದಿದೆ.

ಕಳೆದ ಕೆಲ ವರ್ಷಗಳಿಂದ ಅಳವುಪಾರೆ ಎಂಬಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಇದೀಗ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೆ ಕೈ ಸೇರಬೇಕಿದೆ ಎಂದು ತಿಳಿದು ಬಂದಿದೆ.

ಮರ್ಕಂಜದ ಅಳವುಪಾರೆಯ ಸುತ್ತಮುತ್ತ ಮನೆಗಳು, ಸರ್ಕಾರಿ ಶಾಲೆ, ನೀರಿನ ಟ್ಯಾಂಕ್, ಸರ್ಕಾರಿ ಕಟ್ಟಡಗಳು, ಅಂಗನವಾಡಿ, ಸಹಕಾರಿ ಸಂಸ್ಥೆ ದೇವಸ್ಥಾನಗಳು ಇದ್ದು, ಇದೆಲ್ಲಾ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳದ ಕೆಲವೇ ದೂರದ ಅಂತರದಲ್ಲಿದ್ದು, ಸ್ಫೋಟಕಗಳನ್ನು ಸಿಡಿಸುವಾಗ ಇಲ್ಲೆಲ್ಲಾ ಭೂಮಿ ಕಂಪಿಸುತ್ತಿತ್ತು. ಅಲ್ಲದೇ ಗೋಡೆಗಳು ಬಿರುಕು ಬಿಡುತ್ತಿತ್ತು. ನೀರಿನ ಮೂಲಗಳು ಬತ್ತುತ್ತಿತ್ತು. ಇದರಿಂದ ಜನರು ಆತಂಕಕ್ಕೆ‌ ಒಳಗಾಗಿದ್ದರು. ಹೀಗಾಗಿ ಸ್ಥಳೀಯರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದಲ್ಲದೆ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರು.

ಈ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕ್ರಷರ್ ಸುರಕ್ಷಿತ ವಲಯದಿಂದ ಅಂತರದೊಳಗೆ ಮನೆಗಳು, ದೇವಸ್ಥಾನ, ಕುಡಿಯುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಶಾಲೆ ಇರುವುದರಿಂದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಸುವುದನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದರು ಎನ್ನಲಾಗಿದೆ. ವರದಿಯನ್ನು ಪುರಸ್ಕರಿಸುವ ಜಿಲ್ಲಾಧಿಕಾರಿಯವರು ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರಿಗಳ ಸೂಚನೆಯಂತೆ ಮರ್ಕಂಜದ‌ ಗಣಿಗಾರಿಕೆ ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.