ಶಾಲೆಯ ಕಟ್ಟಡ ಮರು ನಿರ್ಮಾಣಕ್ಕೆ ಅನುದಾನ ಬಂದಿಲ್ಲ, ಶಿಕ್ಷಕರ ಕೊರತೆ

0


ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿ ಶ್ರಮದಾನದ ಮೂಲಕ ವಿನೂತನ ಪ್ರತಿಭಟನೆ

ಕೊಲ್ಲಮೊಗ್ರು ಗ್ರಾಮಧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಶಾಲೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿ ಶಾಲೆಯ ಕಟ್ಟಡದ ಸಮಸ್ಯೆ, ಶಿಕ್ಷಕರ ಕೊರತೆ, ಅಡುಗೆ ಸಿಬ್ಬಂದಿ ಹೆಚ್ಚಿಸಲು ಮೊದಲಾದ ಬೇಡಿಕೆಗಳ ಮುಂದಿಟ್ಟು ಶ್ರಮದಾನದ ಮೂಲಕ ವಿನೂತನ ಪ್ರತಿಭಟನೆ ಜೂ.3 ರಂದು ನಡೆಯಿತು.

“ಈ ಶಾಲೆಯ ಕಟ್ಟಡವು ಸುಮಾರು ೭೦ ವರುಷ ಹಳೆಯ ಕಟ್ಟಡವಾಗಿದ್ದು ,ಇದರ ಮರು ನಿರ್ಮಾಣಕ್ಕಾಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಸರಕಾರಕ್ಕೆ ಮನವಿಗಳನ್ನು ಪ್ರತಿವರ್ಷ ಸಲ್ಲಿಸುತ್ತಲೇ ಬಂದಿರುತ್ತಾರೆ.ಕಳೆದ ೨ ವರುಷಗಳಿಂದ ಸುಮಾರು ಅರುವತ್ತು ಲಕ್ಷ ಅನುದಾನ ಬಂದಿದೆ ಎಂದು ಸರಕಾರ ಕಡೆಯಿಂದ ಭರವಸೆ ಕೊಟ್ಟಿದ್ದರು ಇದುವರೆಗೆ ಯಾವುದೇ ಅನುದಾನ ದೊರಕದಿರುವುದು ವಿಪರ್ಯಾಸ” ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಸುಬ್ರಹ್ಮಣ್ಯ ಎನ್. ಜಿ ಅಳಲನ್ನು ತೋಡಿಕೊಂಡಿದ್ದಾರೆ.


“ಇಲ್ಲಿಯ ನಲಿಕಲಿ ವಿಭಾಗಾದ ಕಟ್ಟಡವು ೯ ವರುಷದ ಹಿಂದೆಯಷ್ಟೇ ಕಟ್ಟಿದ್ದರು. ಅದರ ಮೇಲ್ಚಾವಣಿ ಕುಸಿಯುವ ಹಂತದಲ್ಲಿರುವುದು ಇಲ್ಲಿಯ ವಿಪರ್ಯಾಸ, ಮೇಲ್ಚಾವಣಿಗೆ ಇಲ್ಲಿಯ ಪೋಷಕರೇ ಸೇರಿ ಮಳೆನೀರು ಒಳಗೆ ಬಾರದ ಹಾಗೆ ಒಂದು ಪ್ಲಾಸ್ಟಿಕ್ ಟಾರ್ಪಲ್ ಹಾಕಿರುತ್ತಾರೆ. ಇದೀಗ ಇಲ್ಲಿಯ ಪೋಷಕರು ಮಾತ್ತು ಊರ ಪರವೂರ ದಾನಿಗಳ ಸಹಾಯದಿಂದ ಅಂದಾಜು ೧೫ ಲಕ್ಷ ವೆಚ್ಚದ ನಲಿಕಲಿ ವಿಭಾಗದ ಸುಮಾರು ಸಾವಿರದ ಐನೂರು ಸ್ಕ್ವೇರ್ ಫೀಟ್ ಇರುವ ಒಂದು ಕಟ್ಟಡವನ್ನು ನಿರ್ಮಿಸಿರುತ್ತಾರೆ.


ಇಲ್ಲಿಗೆ ಒಂದು ಶೌಚಾಲಯಕ್ಕೆ ಸುಮಾರು ೫ಲಕ್ಷ ಅನುದಾನ ಬಂದಿದ್ದರು ಕಾಮಗಾರಿ ಆರಂಭವಾಗಲಿಲ್ಲ “ಎಂದು ಹೇಳಿದರು.
ಜೂ.೩ರಂದು ಬೆಳಿಗ್ಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರವರು ಶಾಲೆಗೆ ಆಗಮಿಸಿದ್ದು ಮನವಿ ಸ್ವೀಕರಿಸಿ ಅಲ್ಲಿಯ ಸ್ಥಿತಿ ಗತಿಗಳನ್ನು ಮನಗಂಡು ಆದಷ್ಟು ಬೇಗ ಇಲ್ಲಿಯ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದ್ದರು. ನಂತರ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಮತ್ತು ಪೋಷಕರು ಸೇರಿ ಗ್ರಾಮ ಪಂಚಾಯತ್ ತೆರಳಿ ತಮ್ಮ ಅಳಲನ್ನು ತೋಡಿಕೊಂಡರು. ಆದರೆ ಅಲ್ಲಿ ಅಧ್ಯಕ್ಷರಾಗಲಿ, ಯಾವುದೇ ಸದಸ್ಯರು , ಪಂಚಾಯತ್ ಅಧಿಕಾರಿಗಳಾಗಲಿ ಇರಲಿಲ್ಲ ಎಂದು ದೂರಿದ್ದಾರೆ.
ಎಸ್ ಡಿ ಎಂ ಸಿ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು, ಊರವರು ಪಾಲ್ಗೊಂಡಿದ್ದರು.